Abluru, Sidlaghatta : ರೇಷ್ಮೆ ಕೃಷಿ ಹಾಗೂ ರೇಷ್ಮೆ ಉದ್ದಿಮೆಯಲ್ಲಿಯೂ ಸಮಸ್ಯೆಗಳು ಸಾಮಾನ್ಯವಾಗಿದ್ದು, ಅವುಗಳನ್ನು ಯಶಸ್ವಿಯಾಗಿ ಎದುರಿಸಲು ಪ್ರಯತ್ನಿಸುವುದು ಮಾತ್ರವೇ ಯಶಸ್ಸಿಗೆ ದಾರಿ ಎಂದು ರೇಷ್ಮೆ ಉಪ ನಿರ್ದೇಶಕ ಎಸ್. ಬೋಜಣ್ಣ ಹೇಳಿದರು.
ತಾಲ್ಲೂಕಿನ ಅಬ್ಲೂಡು ಗ್ರಾಮದಲ್ಲಿ ಆಯೋಜಿಸಿದ್ದ “ದ್ವಿತಳಿ ರೇಷ್ಮೆ ಬೆಳೆ ಸಾಕಣೆಯಲ್ಲಿ ತಾಂತ್ರಿಕತೆಯ ಬಲವರ್ಧನೆ” ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಚಳಿಗಾಲ, ಬೇಸಿಗೆ ಮತ್ತು ಮಳೆಗಾಲದಲ್ಲಿ ರೇಷ್ಮೆ ಹುಳು ಮತ್ತು ಹಿಪ್ಪುನೇರಳೆ ಸೊಪ್ಪಿಗೆ ತೊಂದರೆ ನೀಡುವ ರೋಗಗಳು ಹಾಗೂ ಕೀಟಗಳ ಹತೋಟಿ ಕ್ರಮಗಳ ಕುರಿತು ರೈತರಿಗೆ ಮಾರ್ಗದರ್ಶನ ನೀಡಲಾಯಿತು.
ರೇಷ್ಮೆ ಹುಳು ಸಾಕಣೆ ಮನೆಯನ್ನು ಸ್ವಚ್ಛವಾಗಿ ನಿರ್ವಹಿಸುವುದು ಮೊದಲನೆಯ ಮೆಟ್ಟಿಲಾಗಿದ್ದು, ಉತ್ತಮ ಗುಣಮಟ್ಟದ ಚಾಕಿ ಹುಳುಗಳನ್ನು ಆಯ್ಕೆ ಮಾಡುವುದು ಅತ್ಯವಶ್ಯಕ. ಜೊತೆಗೆ ಕೊಟ್ಟಿಗೆ ಗೊಬ್ಬರ ಮತ್ತು ರಸಗೊಬ್ಬರವನ್ನು ಸ್ರೇಷ್ಟ ರೀತಿಯಲ್ಲಿ ಬಳಸಿಕೊಂಡು ಉತ್ತಮ ಹಿಪ್ಪುನೇರಳೆ ಬೆಳೆಯುವಂತೆ ಸಲಹೆ ನೀಡಿದರು.
ರೇಷ್ಮೆ ಕೃಷಿ ಸಹಾಯಕ ನಿರ್ದೇಶಕ ಅಕ್ಮಲ್ ಪಾಷ ರೈತರ ನಿರ್ಲಕ್ಷ್ಯದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಹಣ್ಣಾದ ರೇಷ್ಮೆ ಹುಳಿಗೆ ಸಮರ್ಪಕ ಆರೈಕೆ ನೀಡದ ಕಾರಣ, ಉತ್ತಮ ಗುಣಮಟ್ಟದ ಗೂಡನ್ನು ಕೈಗೆಟುಕಿಸದ ಪರಿಸ್ಥಿತಿ ಉಂಟಾಗುತ್ತಿದೆ. ಐದು ಅಥವಾ ಆರು ದಿನಗಳ ನಂತರ ಮಾತ್ರ ಗೂಡನ್ನು ಚಂದ್ರಿಕೆಯಿಂದ ಬಿಡಿಸುವುದರ ಮಹತ್ವವನ್ನು ಅವರು ವಿವರಿಸಿದರು.
ಚಂದ್ರಿಕೆಯಿಂದ ಗೂಡನ್ನು ಬೇಗ ಬಿಡಿಸುವುದರಿಂದ ಪ್ಯೂಪಾ ಸಾಯುವ ಸಮಸ್ಯೆ ಉಂಟಾಗಿ ಗುಣಮಟ್ಟ ಕುಸಿಯುತ್ತದೆ. ಐದು ದಿನಗಳ ನಂತರ ಮಾತ್ರ ಗೂಡನ್ನು ಬಿಡಿಸಿ, ಮಾರುಕಟ್ಟೆಗೆ ಗುಣಮಟ್ಟದ ಆಧಾರದಲ್ಲಿ ಗ್ರೇಡಿಂಗ್ ಮಾಡಿರುವ ಗೂಡನ್ನು ಮಾತ್ರ ಕಳುಹಿಸುವಂತೆ ಮನವಿ ಮಾಡಿದರು.
ಮಾರುಕಟ್ಟೆಯಲ್ಲಿ ಗುಣಮಟ್ಟದ ಆಧಾರದಲ್ಲಿ ಬೆಲೆ ನಿರ್ಧಾರವಾಗುತ್ತಿದ್ದು, ಪ್ರತಿಯೊಂದು ಗೂಡಿಗೆ ಗರಿಷ್ಠ ಬೆಲೆ ದೊರೆಯುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಜಲ್ಲಿಗೂಡು, ಗಂಟುಗೂಡು ಮತ್ತು ಉತ್ತಮ ಗುಣಮಟ್ಟದ ಗೂಡನ್ನು ಪ್ರತ್ಯೇಕವಾಗಿ ಗ್ರೇಡಿಂಗ್ ಮಾಡಬೇಕೆಂದರು.
ತಲಘಟ್ಟಪುರದ ರೇಷ್ಮೆ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಡಾ. ಅರುಣ, ಡಾ. ಬಿ.ಕೆ. ಪ್ರಕಾಶ್, ಹಾಗೂ ರೇಷ್ಮೆ ವಿಸ್ತರಣಾಧಿಕಾರಿ ಎಚ್.ಟಿ. ತಿಮ್ಮಪ್ಪ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ರೈತರು ತಮ್ಮ ಸಮಸ್ಯೆಗಳ ಕುರಿತು ಪ್ರಶ್ನಿಸಿ ಪರಿಹಾರ ಪಡೆಯುವ ಅವಕಾಶವನ್ನು ಬಳಸಿಕೊಂಡರು.