Home Sidlaghatta ರೇಷ್ಮೆ ಬೆಳೆಗಾರರಿಗೆ ಕೌಶಲ್ಯಾಭಿವೃದ್ದಿ ತರಬೇತಿ

ರೇಷ್ಮೆ ಬೆಳೆಗಾರರಿಗೆ ಕೌಶಲ್ಯಾಭಿವೃದ್ದಿ ತರಬೇತಿ

0

Sidlaghatta : ಉತ್ತಮ ಗುಣಮಟ್ಟದ ರೇಷ್ಮೆಗೂಡನ್ನು ಉತ್ಪಾದಿಸಲು ಗುಣಮಟ್ಟದ ಹಿಪ್ಪುನೇರಳೆ ಸೊಪ್ಪನ್ನು ನೀಡಬೇಕಾಗುತ್ತದೆ. ಅದಕ್ಕಾಗಿ ಹಿಪ್ಪುನೇರಳೆ ತೋಟ ಹಾಗೂ ರೇಷ್ಮೆ ಹುಳು ಸಾಕಣೆ ಮನೆಯ ಉತ್ತಮ ನಿರ್ವಹಣೆಯೂ ಪ್ರಮುಖ ಪಾತ್ರವಹಿಸುತ್ತದೆ ಎಂದು ರೇಷ್ಮೆ ಇಲಾಖೆ ಉಪ ನಿರ್ದೇಶಕ ಭೋಜಣ್ಣ ತಿಳಿಸಿದರು.

ಕೌಶಲ್ಯ ಅಭಿವೃದ್ದಿ ಕೇಂದ್ರ, ಕೃಷಿ ವಿಶ್ವ ವಿದ್ಯಾಲಯ, ಕೃಷಿ ಮಹಾ ವಿದ್ಯಾಲಯ ರೇಷ್ಮೆ ಕೃಷಿ ವಿಭಾಗ ಹಾಗೂ ಶಿಡ್ಲಘಟ್ಟದ ರೇಷ್ಮೆ ಇಲಾಖೆಯ ಆಶ್ರಯದಲ್ಲಿ ನಗರದ ಸರ್ಕಾರಿ ರೇಷ್ಮೆಬಿತ್ತನೆ ಕೋಠಿ ಸಭಾಂಗಣದಲ್ಲಿ ನಡೆದ ರೈತ ಹಾಗೂ ರೈತ ಮಹಿಳೆಯರಿಗೆ ಕೌಶಲ್ಯಾಭಿವೃದ್ದಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ವರ್ಷಗಳಲ್ಲಿ ಎಲ್ಲ ಕ್ಷೇತ್ರಗಳಂತೆ ರೇಷ್ಮೆ ಕೃಷಿ ಕ್ಷೇತ್ರದಲ್ಲೂ ಅಗಾಧವಾದ ತಾಂತ್ರಿಕತೆ ಬಂದಿದೆ. ರೈತರು ನೂತನ ತಾಂತ್ರಿಕತೆಯನ್ನು ಬಳಸಿಕೊಂಡು ಉತ್ತಮ ಗುಣಮಟ್ಟದ ರೇಷ್ಮೆಗೂಡನ್ನು ಉತ್ಪಾದಿಸಿ ಹೆಚ್ಚಿನ ಇಳುವರಿ ಪಡೆದರೆ ಮಾತ್ರವೇ ರೇಷ್ಮೆ ಕೃಷಿ ಲಾಭದಾಯಕವಾಗಲಿದೆ ಎಂದರು.

ರಸಗೊಬ್ಬರಗಳನ್ನು ಕಡಿಮೆ ಮಾಡಿ ಅಗತ್ಯಕ್ಕೆ ತಕ್ಕ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಕೊಟ್ಟಾಗಲೆ ಉತ್ತಮ ಗುಣಮಟ್ಟದ ರಸಭರಿತ ಹಿಪ್ಪುನೇರಳೆ ಸೊಪ್ಪನ್ನು ಉತ್ಪಾದಿಸಲು ಸಾಧ್ಯ. ಈ ನಿಟ್ಟಿನಲ್ಲಿ ರೈತರು ಹೆಚ್ಚು ಗಮನ ಹರಿಸಬೇಕು ಎಂದು ಕೋರಿದರು.

ಈ ನಿಟ್ಟಿನಲ್ಲಿ ಸರ್ಕಾರವು ಇಲಾಖೆಯ ಮೂಲಕ ಕಾಲ ಕಾಲಕ್ಕೆ ರೈತರಿಗೆ ತರಬೇತಿ ನೀಡಲಿದ್ದು ತಜ್ಞರಿಂದ ಸೂಕ್ತರ ತರಬೇತಿ, ಮಾಹಿತಿಯನ್ನು ನೀಡಲಾಗುವುದು. ತರಬೇತಿಯ ಸದುಪಯೋಗಪಡಿಸಿಕೊಳ್ಳಿ ಎಂದು ಮನವಿ ಮಾಡಿದರು.

ರೇಷ್ಮೆಗೂಡು ಮಾರುಕಟ್ಟೆಯ ಸಹಾಯಕ ನಿದೇಶಕ ಕೆ.ತಿಮ್ಮರಾಜು ಮಾತನಾಡಿ, ರೈತರು ಮಾರುಕಟ್ಟೆಗೆ 5-6 ದಿನಗಳ ರೇಷ್ಮೆಗೂಡನ್ನು ತನ್ನಿ. ಇದರಿಂದ ರೇಷ್ಮೆಗೂಡಿಗೆ ಉತ್ತಮ ಬೆಲೆ ಸಿಗಲಿದೆ. ಆದರೆ ಬಹುತೇಕ ರೈತರು 4-5 ದಿನಗಳ ಗೂಡನ್ನು ತರುವುದು ಹೆಚ್ಚು ಎಂದು ಬೇಸರ ವ್ಯಕ್ತಪಡಿಸಿದರು.

ಚಳಿಗಾಲದಲ್ಲಿ ಸುಣ್ಣ ಕಟ್ಟು ರೋಗ ಸೇರಿದಂತೆ ಹಲವು ರೋಗಗಳು ರೇಷ್ಮೆ ಹುಳುಗಳನ್ನು ಕಾಡುವುದುಂಟು. ವಾತಾವರಣದಲ್ಲಿನ ಥಂಡಿ ವಾತಾವರಣ, ಮಂಜಿನ ಹನಿಯ ತೇವಾಂಶ ಇರುವ ಹಿಪ್ಪುನೇರಳೆ ಸೊಪ್ಪನ್ನು ನೀಡುವುದು ಕೂಡ ಸುಣ್ಣ ಕಟ್ಟು ರೋಗ ಹೆಚ್ಚಲು ಕಾರಣವಾಗುತ್ತದೆ ಎಂದರು.

ಸಾಮಾನ್ಯವಾಗಿ ರೈತರು ತಿಂಗಳು ಪೂರ್ತಿ ರೇಷ್ಮೆ ಹುಳುಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಾರೆ. ಆದರೆ ಹಣ್ಣಾದ ದಿನ ಸ್ವಲ್ಪ ನಿರ್ಲಕ್ಷ್ಯವಹಿಸುತ್ತಾರೆ. ಹಣ್ಣಾದ ಮತ್ತು ಅದಕ್ಕೂ ಮೊದಲ ದಿನ ಹೆಚ್ಚಿನ ಕೆಲಸ ಇರುವ ಕಾರಣ ರೈತರು ಸುಸ್ತಾಗಿ ಹಣ್ಣು ಹುಳುಗಳ ನಿರ್ವಹಣೆಯಲ್ಲಿ ಸ್ವಲ್ಪ ಮಟ್ಟಿಗೆ ನಿರ್ಲಕ್ಷ್ಯ ಮಾಡುವ ಕಾರಣ ಗುಣಮಟ್ಟದ ರೇಷ್ಮೆಗೂಡು ಉತ್ಪಾದನೆ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದರು.

ಚಳಿಗಾಲದಲ್ಲಿ ರೇಷ್ಮೆ ಹುಳುಗಳನ್ನು ಕಾಡುವ ಸುಣ್ಣಕಟ್ಟು ರೋಗ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳು, ಉತ್ತಮ ಗುಣಮಟ್ಟದ ರೇಷ್ಮೆಗೂಡು ಉತ್ಪಾದನೆಗಾಗಿ ಹೇಗೆ ಹಣ್ಣಾದ ರೇಷ್ಮೆ ಹುಳುಗಳನ್ನು ನಿರ್ವಹಣೆ ಮಾಡಬೇಕು, ರೇಷ್ಮೆ ಗೂಡನ್ನು ಶಬ್ಭಿ(ಹದ) ಮಾಡುವ ವಿಧಾನ, ರೇಷ್ಮೆಗೂಡಿನ ಗ್ರೇಡಿಂಗ್ ಮಾಡುವುದು ಮತ್ತು ಎಷ್ಟು ದಿನದ ಗೂಡನ್ನು ರೇಷ್ಮೆಗೂಡು ಮಾರುಕಟ್ಟೆ ತಂದರೆ ಉತ್ತಮ ಬೆಲೆ ಸಿಗಲಿದೆ ಎಂಬುದರ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ರೇಷ್ಮೆ ಬೆಳೆಗಾರರಿಗೆ ಜೈವಿಕ ಗೊಬ್ಬರ ಮತ್ತು ಸಿರಿ ಬೂಸ್ಟ್ ಪ್ಯಾಕೇಟ್‌ ಗಳನ್ನು ಉಚಿತವಾಗಿ ವಿತರಿಸಲಾಯಿತು.
ರೇಷ್ಮೆ ಇಲಾಖೆ ಉಪ ನಿರ್ದೇಶಕ ಭೋಜಣ್ಣ, ಬೆಂಗಳೂರು ಕೃಷಿ ಮಹಾ ವಿದ್ಯಾಲಯದ ರೇಷ್ಮೆ ಕೃಷಿ ವಿಭಾಗದ ಪ್ರಾಧ್ಯಾಪಕ ಡಾ.ಮಂಜುನಾಥ್ ಗೌಡ, ಡಾ.ಎನ್.ಅಮರನಾಥ್, ಕೆ.ತಿಮ್ಮರಾಜು, ಅಕ್ಮಲ್ ಪಾಷ, ಡಾ.ಜಿ.ಆರ್.ಅರುಣ, ಮಧುಸೂಧನ್, ರೈತರು ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

error: Content is protected !!
Exit mobile version