ಚಿಕ್ಕಬಳ್ಳಾಪುರ ತಾಲ್ಲೂಕಿನ ಹೊಸಹುಡ್ಯ, ಪಟ್ರೆನಹಳ್ಳಿ, ದಿಬ್ಬೂರು, ರೇಣುಮಾಕಲಹಳ್ಳಿ ಕೋವಿಡ್ ಕೇರ್ ಸೆಂಟರ್ ಹಾಗೂ ಮಂಚನಬಲೆ ಗ್ರಾಮಗಳಿಗೆ ಗುರುವಾರ ಭೇಟಿ ನೀಡಿ ಗ್ರಾಮ ಮಟ್ಟದ ಕೋವಿಡ್ ಟಾಸ್ಕ್ ಫೋರ್ಸ್ ಗಳ ಕಾರ್ಯವೈಖರಿ ಬಗ್ಗೆ ಪರಿಶೀಲಿಸಿ ಜಿಲ್ಲಾಧಿಕಾರಿ ಆರ್.ಲತಾ ಮಾತನಾಡಿದರು.
ಮುಂದಿನ 15 ದಿನಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಸಂಪೂರ್ಣವಾಗಿ ಕೋವಿಡ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಗುರಿ ಹೊಂದಲಾಗಿದೆ. ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ರಚಿಸಿರುವ ಟಾಸ್ಕ್‌ಫೋರ್ಸ್‌ಗಳನ್ನು ಈ ಗುರಿ ಸಾಧಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ಕೋವಿಡ್ ಕೇರ್ ಸೆಂಟರ್ ಗಳಿಗೆ ಭೇಟಿ ನೀಡಿ, ರೋಗಿಗಳೊಂದಿಗೆ ಮಾತನಾಡಿ ಆಹಾರ, ಶುಚಿತ್ವ, ಯೋಗ ಕ್ಷೇಮ, ಆರೋಗ್ಯ ಹಾಗೂ ಕುಂದುಕೊರತೆಗಳ ಬಗ್ಗೆ ವಿಚಾರಿಸಿ, ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಿ ಜಾಗೃತ ವಹಿಸಲು ವೈದ್ಯರು ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹೋಂ ಐಸೊಲೇಷನ್‌ನಲ್ಲಿರುವ ಸೋಂಕಿತರನ್ನು ಭೇಟಿಮಾಡಿ ಅವರ ಮತ್ತು ಕುಟುಂಬದ ಸದಸ್ಯರ ಅರೋಗ್ಯದ ಬಗ್ಗೆ ವಿಚಾರಿಸಿದರು.
ಜಿಲ್ಲೆಯಲ್ಲಿ ಒಟ್ಟು 157 ಗ್ರಾಮ ಪಚಾಯಿತಿಗಳಿದ್ದು, ಎಲ್ಲಾ 1,704 ಗ್ರಾಮಗಳಿಗೂ ಟಾಸ್ಕ್ ಫೋರ್ಸ್ ರಚಿಸಲಾಗಿದೆ ಹಾಗೂ ಪ್ರತಿದಿನ ಪ್ರಗತಿ ಪರಿಶೀಲನೆ ಮಾಡಲಾಗುತ್ತಿದೆ. ಯಾವ ಗ್ರಾಮದಲ್ಲಿ ಹೆಚ್ಚು ಸಕ್ರಿಯ ಪ್ರಕರಣಗಳು ಇವೆಯೋ ಗುರುತಿಸಿ ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ ಎಂದರು.
ಟಾಸ್ಕ್ ಫೋರ್ಸ್‌ಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ. ಈ ತಂಡವು ಪ್ರತಿ ದಿನ ಆಯಾ ಗ್ರಾಮಗಳಲ್ಲಿನ ಪ್ರತಿ ಮನೆಗಳಿಗೆ ಭೇಟಿ ನೀಡಿ ಕೊರೊನ ರೋಗ ಲಕ್ಷಣಗಗಳು ಇರುವವರನ್ನು ಗುರುತಿಸಿ ಅವರ ಮತ್ತು ಕುಟುಂಬದ ಸದಸ್ಯರಿಗೆ ಕೊರೊನಾ ಪರೀಕ್ಷೆ ಮಾಡಿಸಲಾಗುತ್ತಿದೆ. ಸೋಂಕಿತರನ್ನು ಆಯಾ ತಾಲ್ಲೂಕುಗಳಲ್ಲಿರುವ ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖಲಿಸಲಾಗುತ್ತಿದೆ ಎಂದು ತಿಳಿಸಿದರು.
ಸಂಪೂರ್ಣ ಲಾಕ್‌ಡೌನ್ ಪರಿಣಾಮ ಜಿಲ್ಲೆಯಲ್ಲಿ ನಾಲ್ಕೈದು ದಿನಗಳಿಂದ ಸೋಂಕಿನ ಪ್ರಮಾಣ ಕಡಿಮೆಯಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್, ಉಪವಿಭಾಗಾಧಿಕಾರಿ ರಘುನಂದನ್, ಚಿಕ್ಕಬಳ್ಳಾಪುರ ತಾಲ್ಲೂಕು ಕೋವಿಡ್ ನೋಡಲ್ ಅಧಿಕಾರಿ ಭಾಸ್ಕರ್, ತಹಸೀಲ್ದಾರ್ ಗಣಪತಿ ಶಾಸ್ತ್ರಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
Follow on
Facebook: https://www.facebook.com/hicbpur
Twitter: https://twitter.com/hicbpur
WhatsApp: https://wa.me/917406303366?text=Hi