Chikkaballapur: ಚಿಕ್ಕಬಳ್ಳಾಪುರದಿಂದ (Chikkaballapur) ಸುಮಾರು 5 ಕಿ.ಮೀ.ದೂರದಲ್ಲಿರುವ ಭೋಗನಂದೀಶ್ವರ ದೇವಾಲಯ ಐತಿಹಾಸಿಕ ಹಿನ್ನೆಲೆಯುಳ್ಳದ್ದು. ಇದರ ಚರಿತ್ರೆ ಆರಂಭವಾಗುವುದೇ 806 ಇಸವಿಯಿಂದ. ಚೋಳ. ಹೊಯ್ಸಳ ಮತ್ತು ವಿಜಯನಗರ ಸಂಸ್ಥಾನದ ಆಳ್ವಿಕೆ ಕಾಲದಲ್ಲಿ ಅಸ್ತಿತ್ವಕ್ಕೆ ಬಂದ ಈ ದೇವಾಲಯವು ಅಪೂರ್ವವಾದ ಶಿಲ್ಪಕಲೆ ಮತ್ತು ಕಲಾಕೃತಿಗಳನ್ನು ಹೊಂದಿದೆ. ದ್ರಾವಿಡಶೈಲಿಯಲ್ಲಿ ನಿರ್ಮಾಣಗೊಂಡ ಈ ದೇವಾಲಯವು ಐತಿಹಾಸಿಕ ಮಹತ್ವ ಹೊಂದಿದೆ.
ಈ ದೇವಾಲಯಕ್ಕೆ ಒಮ್ಮೆ ಭೇಟಿ ನೀಡಿದರೆ ಸಾಕು, ಅಲ್ಲಿನ ದೇವಾಲಯ ಮತ್ತು ಪುಷ್ಕರಣಿಗಳು ಗಮನಸೆಳೆಯುತ್ತವೆ. ದೇವಾಲಯದ ಎದುರಿನ ವಿಶಾಲ ಉದ್ಯಾನದಲ್ಲಿ ಪ್ರವಾಸಿಗರು ವಿಶ್ರಾಂತಿ ಪಡೆಯಬಹುದು. ಜಾತ್ರೆ ನಡೆದಾಗಲಂತೂ ಇಡೀ ಆವರಣದಲ್ಲಿ ಜನದಟ್ಟಣೆ ಕಂಡು ಬರುತ್ತದೆ. ದೇವಾಲಯದ ಪುಷ್ಕರಣಿ ಸುತ್ತಲೂ ಕಾಲ ಕಳೆಯುವುದೇ ಮನಸ್ಸಿಗೆ ಕೊಂಚ ನೆಮ್ಮದಿ ಮತ್ತು ಸಂತೋಷ ತರುತ್ತದೆ. ಇಲ್ಲಿ ಚಲನಚಿತ್ರ ಮತ್ತು ಧಾರಾವಹಿಗಳ ಚಿತ್ರೀಕರಣವೂ ನಡೆಯುತ್ತದೆ.