Chikkaballapur : ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ (Deputy Commissioner) ಸಭಾಂಗಣದಲ್ಲಿ ಬುಧವಾರ ನಂದಿಯ ಭೋಗ ನಂದೀಶ್ವರ ಜಾತ್ರೆ (Nandi Shree Bhoga Nandishwara Temple Jathre) ಆಯೋಜನೆ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ (Dr. K. Sudhakar) ವಹಿಸಿಕೊಂಡಿದ್ದರು.
ಸಭೆಯಲ್ಲಿ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್ “ಮುಂದಿನ ವರ್ಷ ನಂದಿಯಲ್ಲಿ ಶಿವರಾತ್ರಿಯಂದು ಮೈಸೂರು ದಸರಾ ಹಾಗೂ ಹಂಪಿ ಉತ್ಸವ ಮಾದರಿಯಲ್ಲಿ ಶಿವೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು. ಇದರ ಪೂರಕ ಎನ್ನುವಂತೆ ಈ ಬಾರಿಯೂ ದೊಡ್ಡ ಮಟ್ಟದಲ್ಲಿ ಶಿವೋತ್ಸನವನ್ನು ಆಚರಿಸಲಾಗುವುದು. ಶಿವರಾತ್ರಿ ದಿನದ ಜಾಗರಣೆಯ ಪ್ರಯುಕ್ತ ಮಾ.1 ರಂದು ಸಂಜೆ 6ಕ್ಕೆ ಕಾರ್ಯಕ್ರಮಗಳು ಆರಂಭವಾಗಿ ಮಾ.2ರ ಬೆಳಿಗ್ಗೆ 6ರವರೆಗೆ ನಡೆಯಲಿವೆ. ಅಂದು ಸರಿಗಮಪ ಖ್ಯಾತಿಯ ಹೆಸರಾಂತ ಕಲಾವಿದರು ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಹೆಸರಾಂತ ಹಾಸ್ಯ ಕಲಾವಿದರು ನಗೆ ಹಬ್ಬ ನಡೆಸಿಕೊಡುವರು. ಕೇರಳದ ಖ್ಯಾತ ಚಂಡೆ ವಾದಕರಿಂದ ವಾದನ ಕಾರ್ಯಕ್ರಮ ಇರಲಿದೆ. ಹರಿಕಥೆ, ಭಜನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಸ್ಥಳೀಯ ಕಲಾತಂಡಗಳಿಂದಲೂ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ದೇವಾಲಯಕ್ಕೆ ವಿಶೇಷ ದೀಪಾಲಂಕಾರ, ಹಣ್ಣು ಹಾಗೂ ಹೂವಿನ ಅಲಂಕಾರ ಮಾಡಿ ಎಂದಿನಂತೆ ದನಗಳ ಜಾತ್ರೆ ನಡೆಸಿ ರಾಸು ಪ್ರದರ್ಶನಕ್ಕೂ ವ್ಯವಸ್ಥೆ ಕಲ್ಪಿಸಲಾಗುತ್ತದೆ” ಎಂದು ತಿಳಿಸಿದರು.
ಜಾತ್ರೆ ಪ್ರಯುಕ್ತ ಹೆಚ್ಚಿನ ಬಸ್ ವ್ಯವಸ್ಥೆ ಮಾಡಿ ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಬಕು. ಭಕ್ತರಿಗೆ ಕುಡಿಯುವ ನೀರಿನ ಪೂರೈಕೆ, ಅನ್ನ ಸಂತರ್ಪಣೆ ಸೇರಿದಂತೆ ಯಾವುದೇ ಲೋಪ ಆಗದಂತೆ ಕ್ರಮತೆಗದುಕೊಂಡು ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಪ್ರದರ್ಶನ ಮತ್ತು ವಿವಿಧ ಮಹಿಳಾ ಸ್ವಸಹಾಯ ಸಂಘಗಳು ತಯಾರಿಸುವ ಆಹಾರೋತ್ಪನ್ನ ಪ್ರದರ್ಶಿಸುವ ಉದ್ದೇಶಕ್ಕಾಗಿ ವಿವಿಧ ರೀತಿಯ ಮಳಿಗೆಗಳನ್ನು ತೆರೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಆರ್.ಲತಾ (Deputy Commissioner R. Latha), ಹೆಚ್ಚವರಿ ಜಿಲ್ಲಾಧಿಕಾರಿ ಎಚ್.ಅಮರೇಶ್, , ಉಪವಿಭಾಗಾಧಿಕಾರಿ ಜಿ.ಸಂತೋಷ್ ಕುಮಾರ್ ಹಾಗೂ ಅಧಿಕಾರಿಗಳು ಪಾಲ್ಕೊಂಡಿದ್ದರು.