Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಗ್ರಾಮದ ಭೋಗ ನಂದೀಶ್ವರ ದೇಗುಲದ ಆವರಣದಲ್ಲಿ ಭೋಗ ನಂದೀಶ್ವರ (Bhoga Nandishwara) ಮತ್ತು ಯೋಗ ನಂದೀಶ್ವರ (Yoga Nandishwara) ಜೋಡಿ ರಥೋತ್ಸವವನ್ನು (Nandi Jodi Rathotsava) ಗುರುವಾರ ಶ್ರದ್ಧೆ, ಭಕ್ತಿಯಿಂದ ನೆರವೇರಿಸಲಾಯಿತು.
ಯೋಗ ನಂದೀಶ್ವರ, ಭೋಗನಂದೀಶ್ವರಸ್ವಾಮಿ, ಗಿರಿಜಾಂಬ, ಅಂಬಿಕಾ ಮತ್ತು ಗಣಪತಿಯ ಉತ್ಸವ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದ ರಥಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಮತ್ತು ಶಾಸಕ ಪ್ರದೀಪ್ ಈಶ್ವರ್ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ದೇವಾಲಯದ ಆವರಣ ದಿಂದ ರಥವು ಮುಂದಡಿ ಇಡುತ್ತಿದ್ದಂತೆ ಭಕ್ತರು ಬಾಳೆ ಹಣ್ಣು, ದವನ ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು.
ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಜಿ.ಪಂ ಸಿಇಒ ಪ್ರಕಾಶ್ ನಿಟ್ಟಾಲಿ ಹಾಗೂ ಅಧಿಕಾರಿಗಳು ಹಾಜರಿದ್ದರು.