Chikkaballapur : ಚಿಕ್ಕಬಳ್ಳಾಪುರ ನಗರದ ಸರ್ ಎಂ.ವಿ ಜಿಲ್ಲಾ ಕ್ರೀಡಾಂಗಣದಲ್ಲಿ (Sir M.V Stadium) ಜಿಲ್ಲಾಡಳಿತ ಆಯೋಜಿಸಿದ್ದ ಗಣರಾಜ್ಯೋತ್ಸವ (Republic Day) ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ. ನಾಗರಾಜ್ (M.T.B. Nagaraj) ಮಹಾತ್ಮ ಗಾಂಧಿ ಮತ್ತು ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು. ಪೊಲೀಸರು, ಗೃಹರಕ್ಷಕ ದಳದ ಸಿಬ್ಬಂದಿಯಿಂದ ಗೌರವ ವಂದನೆಯನ್ನು ಸಚಿವರು ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ. ನಾಗರಾಜ್ ” ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಮತ್ತು ಡಾ.ಸಿ.ಎನ್.ಆರ್. ರಾವ್ ಅವರು ಜನಿಸಿರುವಂತ ಹೆಮ್ಮೆಯ ಜಿಲ್ಲೆ ಚಿಕ್ಕಬಳ್ಳಾಪುರ. ಕೃಷಿ ಪ್ರಧಾನ ಜಿಲ್ಲೆಯಾಗಿರುವ ಚಿಕ್ಕಬಳ್ಳಾಪುರದಲ್ಲಿ ಈ ವರ್ಷ ಉಂಟಾದ ಅತಿವೃಷ್ಟಿಯಿಂದ ಒಟ್ಟಾರೆ 58,207 ಹೆಕ್ಟೇರ್ ಬೆಳೆ ಹಾನಿಯಾಗಿದೆ. 81,165 ರೈತರಿಗೆ ₹ 44.87 ಕೋಟಿ ಪರಿಹಾರ ನೀಡಲಾಗಿದೆ. ಜಿಲ್ಲೆಯು 2ನೇ ಡೋಸ್ Covid-19 ಲಸಿಕೆ ನೀಡುವಲ್ಲಿ ರಾಜ್ಯದಲ್ಲಿ 2ನೇ ಸ್ಥಾನದಲ್ಲಿದೆ. ಕೈಗಾರಿಕಾ ಹಬ್ ಆಗಿ ಜಿಲ್ಲೆಯನ್ನು ಪರಿವರ್ತಿಸಲು ಸರ್ಕಾರ ಒಲವು ತೋರಿದ್ದು ರಾಜ್ಯ ಉನ್ನತ ಮಟ್ಟದ ಸಮಿತಿಯು ಈ ದಿಸೆಯಲ್ಲಿ 43 ಹೊಸ ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ನೀಡಿದೆ. ಒಟ್ಟು ₹ 4,521.64 ಕೋಟಿ ಬಂಡವಾಳ ಹೂಡಿಕೆಯನ್ನು ನಿರೀಕ್ಷಿಸಲಾಗಿದೆ” ಎಂದು ಹೇಳಿದರು.
ಪೊಲೀಸ್ ಬ್ಯಾಂಡ್ ಮಾಸ್ಟರ್ ವೆಂಕಟೇಶಪ್ಪ ಮತ್ತು ತಂಡದಿಂದ ಮೂಡಿಬಂದ ರಾಷ್ಟ್ರಗೀತೆ ಕಾರ್ಯಕ್ರಮದ ಕೇಂದ್ರ ಬಿಂದುವಾಗಿತ್ತು. ಸಂಗೀತ ಶಿಕ್ಷಕ ಮಹಾಲಿಂಗಯ್ಯ ಮಠದ ಹಾಗೂ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ನಾಡಗೀತೆ ಹಾಡಿದರು. ಮುಖ್ಯಮಂತ್ರಿ ಚಿನ್ನದ ಪದಕ ಪಡೆದ ರಾಜ್ಯ ರಸ್ತೆ ಸಾರಿಗೆ ನಿಗಮದ ಚಿಕ್ಕಬಳ್ಳಾಪುರ ವಿಭಾಗದ 11 ಚಾಲಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಜಿಲ್ಲಾಧಿಕಾರಿ ಆರ್. ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ. ಶಿವಶಂಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್. ಅಮರೇಶ್, ನಗರಸಭೆ ಅಧ್ಯಕ್ಷ ಡಿ.ಎಸ್. ಆನಂದರೆಡ್ಡಿ ಬಾಬು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.