Chikkaballapur : ವೈದ್ಯಕೀಯ ಶಿಕ್ಷಣ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಂದಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧನಾ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ ಆಶ್ರಯದಲ್ಲಿ ಜಿಲ್ಲಾ ಕೇಂದ್ರದಲ್ಲಿ ನಿರ್ಮಿಸಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು (Children Hospital Inauguration) ಗುರುವಾರ ಉದ್ಘಾಟಿಸಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ನಂದಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಭೋದನಾ ಆಸ್ಪತ್ರೆಯ ನಿರ್ದೇಶಕ ಡಾ.ಮಂಜುನಾಥ “ಜನರ ಬಹುದಿನದ ಕನಸಾಗಿದ್ದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆರೋಗ್ಯ ಸೇವೆಗೆ ಮುಕ್ತವಾಗಿದ್ದು ಪೂರ್ಣ ಪ್ರಮಾಣದಲ್ಲಿ ಮಾರ್ಚ್ 4ರಿಂದ ಕಾರ್ಯನಿರ್ವಹಿಸಲಿದೆ. ಸಾರ್ವಜನಿಕರು ಈ ಆರೋಗ್ಯ ಸೇವೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಈ ಹಿಂದೆ ಜಿಲ್ಲಾಸ್ಪತ್ರೆ ನಡೆಯುತ್ತಿದ್ದ ಕಟ್ಟಡವನ್ನು ಹೊಸದಾಗಿ ವಿನ್ಯಾಸಗೊಳಿಸಲಾಗಿದ್ದು 17 ಮಕ್ಕಳ ವಾರ್ಡ್‌ಗಳನ್ನು ನಿರ್ಮಿಸಲಾಗಿದೆ. ಆಮ್ಲಜನಕ ಸಹಿತ ಮತ್ತು ವೆಂಟಿಲೆಟರ್ ವ್ಯವಸ್ಥೆಯುಳ್ಳ 5 ಐಸಿಯು ಮತ್ತು 5 ಎಚ್‌ಡಿಯು ಹಾಸಿಗೆಗಳನ್ನು ಮೀಸಲಿಡಲಾಗಿದೆ. ಸ್ತ್ರೀ ರೋಗಗಳ ಆರೋಗ್ಯ ಸೇವೆಗಾಗಿ 20 ವಾರ್ಡ್‌ಗಳನ್ನು ನಿರ್ಮಿಸಲಾಗಿದೆ. ಒಟ್ಟಾರೆ 87 ವಾರ್ಡ್‌ಗಳು, 4 ಹೆರಿಗೆ ಕೊಠಡಿಗಳನ್ನು ಅತ್ಯಂತ ಆಧುನಿಕ ವ್ಯವಸ್ಥೆಯಡಿ ನಿರ್ಮಿಸಲಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ.ಮಂಜುಳಾ ದೇವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್, ನಿವಾಸಿ ವೈದ್ಯ ಡಾ.ರಮೇಶ್, ಮಕ್ಕಳ ತಜ್ಞರಾದ ಡಾ. ಪ್ರಕಾಶ್, ಡಾ. ರವಿಕುಮಾರ್, ಡಾ. ವಿಜಯ, ಡಾ.ಚಂದ್ರಶೇಖರ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.