Chintamani : ಅಕ್ಟೋಬರ್ 13ರಂದು ರಾತ್ರಿ ಜೆಡಿಎಸ್ ನಗರಸಭೆ ಸದಸ್ಯ ಅಗ್ರಹಾರ ಮುರಳಿ ಅವರ ಮೇಲೆ ನಡೆದಿದ್ದ ಮಾರಣಾಂತಿಕ ಹಲ್ಲೆ ಖಂಡಿಸಿ, ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ವಿವಿಧ ದಲಿತ, ಅಲ್ಪಸಂಖ್ಯಾತ ಸಂಘಟನೆಗಳ ಒಕ್ಕೂಟ ಬುಧವಾರ ಕರೆ ನೀಡಿದ್ದ ಚಿಂತಾಮಣಿ ಬಂದ್ (Chintamani Bundh) ಯಶಸ್ವಿಯಾಯಿತು.
ನಗರದಾದ್ಯಂತ ಅಂಗಡಿ-ಮುಂಗಟ್ಟುಗಳು ಸೇರಿದಂತೆ ಬಹುತೇಕ ಎಲ್ಲ ವಾಣಿಜ್ಯ ಸಂಸ್ಥೆಗಳು, ಹೋಟೆಲ್, ಚಿತ್ರಮಂದಿರ, ಪೆಟ್ರೋಲ್ ಬಂಕ್‌ಗಳು ಸ್ವಯಂಪ್ರೇರಿತವಾಗಿ ಮುಚ್ಚಿದ್ದವು. ಸಂಘಟನೆಗಳ ಮುಖಂಡರು ನಗರದಾದ್ಯಂತ ಬೈಕ್‌ಗಳಲ್ಲಿ ಸಂಚರಿಸಿ ಸ್ವಯಂಪ್ರೇರಿತ ಬಂದ್ ಮಾಡುವಂತೆ ಕೋರಿದರು. ಪೊಲೀಸರು ಬೆಂಗಾವಲಾಗಿದ್ದು ಬಲವಂತವಾಗಿ ಬಂದ್ ಮಾಡುವಂತೆ ಒತ್ತಾಯ ಮಾಡಬಾರದು ಎಂದು ಎಚ್ಚರಿಸಿದರು.
ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನಾಕಾರರ ಮೆರವಣಿಗೆ ನಗರದ ಪ್ರವಾಸಿ ಮಂದಿರದಿಂದ ಹೊರಟು ಮಾರುತಿ ವೃತ್ತ, ಗಜಾನನ ವೃತ್ತ, ಬಾಗೇಪಲ್ಲಿ ವೃತ್ತ, ಎಂ.ಜಿ.ರಸ್ತೆ, ಗಜಾನನ ವೃತ್ತ, ಪಿಸಿಆರ್ ಕಾಂಪ್ಲೆಕ್ಸ್, ಚೇಳೂರು ವೃತ್ತ, ಕೋಲಾರ ವೃತ್ತ, ಸರ್ಕಾರಿ ಬಸ್ ನಿಲ್ದಾಣ ರಸ್ತೆ, ಬೆಂಗಳೂರು ವೃತ್ತ, ತಾಲ್ಲೂಕು ಕಚೇರಿ ವೃತ್ತ ತಲುಪಿತು.