Chintamani : ಇಂಡಿಯನ್ ರೆಡ್ ಕ್ರಾಸ್ (Indian Red Cross Society) ಚಿಕ್ಕಬಳ್ಳಾಪುರ ಜಿಲ್ಲಾ ಘಟಕ, ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಸಂಯುಕ್ತ ಆಶ್ರಯದಲ್ಲಿ ಚಿಂತಾಮಣಿ ನಗರದ ರೇಷ್ಮೆ ಕೃಷಿ ಕಾಲೇಜಿನಲ್ಲಿ ಗುರುವಾರ ಸ್ವಯಂಪ್ರೇರಿತ ರಕ್ತದಾನ ಶಿಬಿರ (Blood Camp) ಆಯೋಜಿಸಲಾಗಿತ್ತು. ಶಿಬಿರದಲ್ಲಿ ಒಟ್ಟು 70 ಯೂನಿಟ್ ರಕ್ತವನ್ನು ಸಂಗ್ರಹವಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ತಾಲ್ಲೂಕು ಸಂಯೋಜಕ ಹಾಗೂ ನಿವೃತ್ತ ಶಿಕ್ಷಣಾಧಿಕಾರಿ ನಾರಾಯಣರೆಡ್ಡಿ “ಆರೋಗ್ಯವಂತ ಯುವಕರು ಎಷ್ಟು ಬಾರಿ ಬೇಕಾದರೂ ರಕ್ತದಾನ ಮಾಡಬಹುದು. ರಕ್ತದಾನದಿಂದ ಯಾವುದೇ ತೊಂದರೆ ಇಲ್ಲ ನೀಡಿದಷ್ಟು ಹೊಸರಕ್ತ ಉತ್ಪತ್ತಿಯಾಗುತ್ತದೆ. ಹೆರಿಗೆ, ಅಪಘಾತ, ಶಸ್ತ್ರಚಿಕಿತ್ಸೆ ಮುಂತಾದ ಸಂದರ್ಭಗಳಲ್ಲಿ ಅತ್ಯಂತ ಕ್ಲಿಷ್ಟ ಪರಿಸ್ಥಿತಿಯಲ್ಲಿ ಮತ್ತೊಬ್ಬರ ಪ್ರಾಣ ಉಳಿಸಲು ರಕ್ತ ಅತ್ಯಗತ್ಯವಾಗಿದ್ದು, ವಿದ್ಯಾರ್ಥಿಗಳು ಮತ್ತು ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಬೇಕು ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಜಿಲ್ಲಾ ಘಟಕದ ನೋಡಲ್ ಅಧಿಕಾರಿ ಡಾ. ನಳಿನಾ, ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಸಂಜೀವ ಕ್ಯಾತಪ್ಪನವರ್, ಕಾಲೇಜಿನ ಡೀನ್ ಡಾ.ಪಿ. ವೆಂಕಟರವಣ, ರೇಷ್ಮೆ ಕೃಷಿ ಮಹಾವಿದ್ಯಾಲಯದ ಡಾ.ಎಂ.ವಿ. ಶ್ರೀನಿವಾಸರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.