Chintamani : ಮಂಗಳವಾರ ರಾತ್ರಿ ಚಿಂತಾಮಣಿ ತಾಲ್ಲೂಕಿನ ಮಿಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 10 ಹಳ್ಳಿಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿ, ಜನರು ಭಯಭೀತರಾಗಿ ಮನೆಗಳಿಂದ ಹೊರ ಬಂದು ರಸ್ತೆಗಳಲ್ಲಿ ಕಾಲ ಕಳೆದರು ಎನ್ನಲಾಗಿತ್ತು.
ಚಿಂತಾಮಣಿ ತಾಲ್ಲೂಕ್ಕಿನ ಮಿಟ್ಟಹಳ್ಳಿ, ನಂದನವನ, ಗೋನೇಪಲ್ಲಿ, ಅಪ್ಪಸಾನಹಳ್ಳಿ, ಕೊಮ್ಮೇಪಲ್ಲಿ, ಕೋಡೇಗಂಡ್ಲು, ಬಸಾಪುರ, ಅಗ್ರಹಾರ, ಅನಪ್ಪಲ್ಲಿ, ಗೌಡನಹಳ್ಳಿ, ದೊಡ್ಡಿಹಳ್ಳಿ ಮತ್ತಿತರ ಗ್ರಾಮಗಳಲ್ಲಿ ರಾತ್ರಿ ಸುಮಾರು 8.50ರ ಸಮಯದಲ್ಲಿ ಮೂರು ಬಾರಿ ಶಬ್ದ ಹಾಗೂ ಭೂಮಿ ಕಂಪಿಸಿದ ಅನುಭವವಾಗಿದೆ. ಕೂಡಲೇ ಜನರು ಹೊರಗಡೆ ಓಡಿ ಬಂದು ಬಯಲಿನಲ್ಲಿ ಸೇರಿದ್ದಾರೆ.
ಸ್ಥಳಕ್ಕೆ ಭೇಟಿಮಾಡಿದ ಜಿಲ್ಲಾಧಿಕಾರಿ ಆರ್.ಲತ ಮಾತನಾಡಿ ಗೌರಿಬಿದನೂರು ಹಾಗೂ ಬೆಂಗಳೂರು ಭೂಕಂಪ ಮಾಪನಾ ಕೇಂದ್ರಗಳಲ್ಲಿ ಭೂಕಂಪನದ ಯಾವುದೇ ಸಂಕೇತ ( Signal )ಗಳು ದಾಖಲಾಗಿಲ್ಲ, ಶಬ್ದಕ್ಕೆ ಸಂಬಂಧಿಸಿದಂತೆ ತಾಂತ್ರಿಕ ವರದಿಗಳು ಬಂದಿದ್ದು, ಇದು ಭೂಕಂಪನವಲ್ಲ. ಬೆಂಗಳೂರಿನ ರಾಷ್ಟ್ರೀಯ ಶಿಲಾ ಯಾಂತ್ರಿಕತೆ ಸಂಸ್ಥೆಯಿಂದಲೂ ಈಗಾಗಲೇ ಮಾಹಿತಿ ಕಲೆ ಹಾಕಲಾಗಿದೆ. ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಪ್ರಾಧಿಕಾರ ಈ ಪ್ರದೇಶದ ಚಟುವಟಿಕೆಗಳ ಮೇಲೆ ನಿರಂತರವಾಗಿ ವಿಶೇಷ ಗಮನವಹಿಸಿದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, ಎಲ್ಲೂ ಭೂಕಂಪ ಆಗಿಲ್ಲ. ಭೂಕಂಪವಾಗಿದ್ದರೆ ಮಾಪನಾ ಕೇಂದ್ರಗಳಲ್ಲಿ ಅಲ್ಪ ಪ್ರಮಾಣದಲ್ಲಾದರೂ ದಾಖಲಾಗುತ್ತಿತ್ತು. ಶಬ್ದ ಹೇಗೆ ಬಂದಿದೆ ಎಂಬುದನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿಗಳಿಂದ ಪರಿಶೀಲನೆ ನಡೆಸಲಾಗುವುದು ಎಂದರು
ತಹಶೀಲ್ದಾರ್ ಹನುಮಂತರಾಯಪ್ಪ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur