ಕಳೆದ ಆರು ತಿಂಗಳಿನಿಂದ ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ಅಖಿಲ ಭಾರತ ಕಿಸಾನ್ ಯೂನಿಯನ್ ನೇತೃತ್ವದಲ್ಲಿ ವಿವಿಧ ರೈತ ಸಂಘಟನೆಗಳು ನಡೆಸುತ್ತಿರುವ ಚಳುವಳಿಯನ್ನು ನಿರ್ಲಕ್ಷಿಸಿ ತಾತ್ಸಾರತೋರುತ್ತಿರುವ ಕೇಂದ್ರ ಸರ್ಕಾರದ ವರ್ತನೆಯನ್ನು ಖಂಡಿಸಿ ಬುಧವಾರ ಶಿಡ್ಲಘಟ್ಟ ನಗರದ ರೈತ ಸಂಘದ ಕಚೇರಿಯ ಮೇಲೆ ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ರೈತ ಸಂಘದ ಸದಸ್ಯರು ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ರೈತ ವಿರೋಧಿ ಕಾಯ್ದೆಗಳು ಸೇರಿದಂತೆ ಎಪಿಎಂಸಿ, ಭೂಸ್ವಾಧೀನ ಹಾಗೂ ಭೂ ಸುದಾರಣೆ ಕಾಯ್ದೆಯ ವಿರುದ್ದ ದೆಹಲಿಯಲ್ಲಿ ಅಖಿಲ ಭಾರತ ಕಿಸಾನ್ ಯೂನಿಯನ್ ನೇತೃತ್ವದಲ್ಲಿ ನಡೆಸುತ್ತಿರುವ ಚಳುವಳಿ ಪ್ರಾರಂಭವಾಗಿ ಇಂದಿಗೆ ಆರು ತಿಂಗಳಾಗಿದೆ. ಇಷ್ಟಾದರೂ ಕೇಂದ್ರ ಸರ್ಕಾರ ತಮ್ಮ ಮೊಂಡುತನದಿಂದ ರೈತರೊಂದಿಗೆ ಮಾತುಕತೆಗೆ ಮುಂದಾಗದೇ ಕೊರೊನಾ ಸಂಕಷ್ಟದ ನಡುವೆಯೂ ಹಠಮಾರಿತನ ತೋರುತ್ತಿದೆ.
ರೈತರನ್ನು ದೆಹಲಿಯ ಗಡಿಭಾಗದಲ್ಲಿ ತಡೆಯುವ ಮೂಲಕ ಹೋರಾಟ ಹತ್ತಿಕ್ಕುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ. ಸಾಮಾನ್ಯ ಜನರ ಕಲ್ಯಾಣಕ್ಕೆ ಒತ್ತು ನೀಡುವ ಬದಲು ಸರ್ಕಾರ ಕಾರ್ಪೊರೇಟ್‌ಗಳ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿದೆ. ಅವರು ರೈತರ ಬೇಡಿಕೆಗಳಿಗೆ ಮಣಿಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯಾಧ್ಯಂತ ಕೊರೋನಾ ಎರಡನೇ ಅಲೆಯ ಹಿನ್ನಲೆಯಲ್ಲಿ ಲಾಕ್ ಡೌನ್ ಇರುವುದರಿಂದ ಸಾಮೂಹಿಕ ಪ್ರತಿಭಟನೆ ಮಾಡದೇ ರೈತ ಸಂಘಟನೆಗಳ ಪದಾಧಿಕಾರಿಗಳು ತಮ್ಮ ತಮ್ಮ ಕಚೇರಿ ಸೇರಿದಂತೆ ಮನೆಯ ಮೇಲೆ ಕಪ್ಪು ಭಾವುಟ ಪ್ರದರ್ಶಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತ ಪಡಿಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ವೇಣುಗೋಪಾಲ್, ಮುನಿನಂಜಪ್ಪ, ರಮೇಶ್, ತಮ್ಮಣ್ಣ, ಕೆಂಪಣ್ಣ, ಮಂಜುನಾಥ್, ನಾರಾಯಣಸ್ವಾಮಿ ಹಾಜರಿದ್ದರು.