Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ದೊಡ್ಡಮರಳಿ ಗ್ರಾಮದ ಕೃಷಿ ಸೇವಾ ಸಹಕಾರ ಸಂಘದ ಎದುರು ರೈತರು ಡಿಎಪಿ ರಸಗೊಬ್ಬರಕ್ಕಾಗಿ ಬೆಳಿಗ್ಗೆ 6ರಿಂದಲೇ ಸಾಲುಗಟ್ಟಿದ್ದಾರೆ. ದೊಡ್ಡಮರಳಿ ಸಂಘದಲ್ಲಿ ಹೊರತುಪಡಿಸಿದರೆ ಚಿಕ್ಕಬಳ್ಳಾಪುರ ನಗರ ಸೇರಿದಂತೆ ಜಿಲ್ಲೆಯಲ್ಲಿನ ಬಹಳಷ್ಟು ಕಡೆಗಳಲ್ಲಿರುವ ಅಂಗಡಿಗಳಲ್ಲಿ ಡಿಎಪಿ ರಸಗೊಬ್ಬರ ದೊರೆಯುತ್ತಿಲ್ಲ. ಆದ್ದರಿಂದ ದೂರದ ಪೆರೇಸಂದ್ರ, ಶಿಡ್ಲಘಟ್ಟ, ದೇವನಹಳ್ಳಿ, ದೊಡ್ಡಬಳ್ಳಾಪುರ ತಾಲ್ಲೂಕಿನ ರೈತರು ಬೆಳಿಗ್ಗೆಯೇ ಸಂಘದ ಕಚೇರಿಯ ಎದುರು ಸಾಲಾಗಿ ನಿಲ್ಲುತ್ತಿದ್ದಾರೆ.
ದೊಡ್ಡಮರಳಿ ಗ್ರಾಮದ ಕೃಷಿ ಸೇವಾ ಸಹಕಾರ ಸಂಘದಲ್ಲಿ ಹೊರತುಪಡಿಸಿದರೆ ಬೇರೆ ಕಡೆ ಡಿಎಪಿ ಗೊಬ್ಬರ ದೊರೆಯುತ್ತಿಲ್ಲ. 20 ದಿನಗಳ ಹಿಂದೆಯೇ 30 ಟನ್ ಗೊಬ್ಬರ ನೀಡುವಂತೆ ಮನವಿ ಮಾಡಿದ್ದರೆ 15 ಟನ್ ನೀಡಿದ್ದಾರೆ. ಗೊಬ್ಬರ ಕಡಿಮೆ ಬಂದಿರುವುದರಿಂದ ರೈತರಿಗೆ ತೊಂದರೆಯಾಗಬಾರದೆಂದು ಆಧಾರ್ ಕಾರ್ಡ್ ನಕಲು ಪಡೆದು ಒಬ್ಬ ರೈತರಿಗೆ ಒಂದು ಮೂಟೆ ಡಿಎಪಿ ಮಾತ್ರ ನೀಡಲಾಗುತ್ತಿದೆ ಎಂದು ಗ್ರಾಮದ ಮುಖಂಡ ವೆಂಕಟೇಶ್ ತಿಳಿಸಿದರು.
ಸಂಘದ ನಿರ್ದೇಶಕ ಗಣೇಶ್ ಮಾತನಾಡಿ ‘ಖಾಸಗಿ ಅಂಗಡಿಗಳಿಗಿಂತ ಸೊಸೈಟಿಗಳಿಗೆ ರಸಗೊಬ್ಬರ ನೀಡಿದರೆ ರೈತರಿಗೆ ಒಳ್ಳೆಯದು. ಬೇರೆ ತಾಲ್ಲೂಕಿನವರು ಖರೀದಿಗೆ ಬರುತ್ತಿದ್ದು, ಎಲ್ಲರೂ ರೈತರೇ ಆಗಿರುವುದರಿಂದ ವಾಪಸ್ ಕಳುಹಿಸದೆ ಎರಡು ಮೂಟೆ ಕೊಡುವ ಕಡೆ ಒಂದು ಮೂಟೆ ಗೊಬ್ಬರ ನೀಡುತ್ತಿದ್ದೇವೆ’ ಎಂದು ಹೇಳಿದರು.