Gudibande : ಗುರುವಾರ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಾಲ್ಲೂಕು ಘಟಕ ಹಾಗೂ ಸಿಪಿಎಂ ವತಿಯಿಂದ ಗುಡಿಬಂಡೆ ತಾಲ್ಲೂಕು ಕಚೇರಿಯಲ್ಲಿ ಅಧಿಕಾರಿಗಳು ರೈತರು ಮತ್ತು ಜನರ ಬಳಿ ಲಂಚ (Corruption) ನೀಡುವಂತೆ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿ ಪಟ್ಟಣದ ತಾಲ್ಲೂಕು ಕಚೇರಿ (Gudibande Taluk Office) ಎದುರು ಪ್ರತಿಭಟನೆ (Protest) ನಡೆಯಿತು.
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಪಿ. ರಾಮನಾಥ್ ” ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಡುತ್ತಿರುವ ಬಗ್ಗೆ ರೈತರು ಹಾಗೂ ಜನರು ತಹಶೀಲ್ದಾರ್ ಎನ್.ಮನೀಷ್ ಅವರಿಗೆ ಮೌಖಿಕವಾಗಿ ದೂರು ನೀಡಿದರೂ, ನಿರ್ಲಕ್ಷ್ಯ ವಹಿಸಿದ್ದಾರೆ. ತಮ್ಮ ಅಧೀನದಲ್ಲಿರುವ ಅಧಿಕಾರಿಗಳಿಂದ ರೈತರ ಕೆಲಸ ಮಾಡಿಸುವಲ್ಲೂ ತಹಶೀಲ್ದಾರ್ ವಿಫಲರಾಗಿದ್ದಾರೆ. ತಾಲ್ಲೂಕು ಕಚೇರಿಯಲ್ಲಿ ರೈತರ ಯಾವುದೇ ಕೆಲಸಗಳನ್ನು ಅಧಿಕಾರಿಗಳು ಮಾಡಿಕೊಡುತ್ತಿಲ್ಲ. ತಾಲ್ಲೂಕು ದಂಡಾಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ ಶಂಕೆಯಿದ್ದು ಈ ತಹಶೀಲ್ದಾರ್ ಅವರ ಅವಧಿಯಲ್ಲಿ ನಡೆದ ಎಲ್ಲ ಪ್ರಕ್ರಿಯೆಗಳನ್ನು ಕಾನೂನುಬದ್ಧವಾಗಿ ಇಲಾಖೆ ತನಿಖೆಗೆ ಒಳಪಡಿಸಬೇಕು” ಎಂದು ತಿಳಿಸಿದರು.
ಬಂದಾರ್ಲಹಳ್ಳಿಯ ಹಳೆ ಸರ್ವೆ ನಂ. 32, ಹೊಸ ಸರ್ವೆ ನಂ. 17ರ ಜಮೀನಿನ ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂ ಮಾಫಿಯಾ ಮಾರಾಟ ಮಾಡಿದ್ದು, ಇದನ್ನು ತನಿಖೆ ಮಾಡಿ ಸರ್ಕಾರ ತನ್ನ ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು. ಸಂಜೆ ವೇಳೆ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿಗಳ ಕಚೇರಿ ಅಧಿಕಾರಿಯೊಬ್ಬರು ರೈತರ ಮನವಿ ಪತ್ರ ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಬಲರಾಮಪ್ಪ, ಕಾರ್ಯದರ್ಶಿ ನಂದೀಶ್, ಕೆ.ಎನ್.ಸೋಮಶೇಖರ್, ಆರ್.ರಾಜಪ್ಪ, ನಂದೀಶ್, ವೆಂಕಟರೋಣಪ್ಪ, ತಿರುಮಣಿ ಗಾಯತ್ರಿ, ರವೀಂದ್ರರೆಡ್ಡಿ, ವೆಂಕಟರೆಡ್ಡಿ, ವೆಂಕಟರೆಡ್ಡಿ, ರಾಮರೆಡ್ಡಿ, ದೇವರಾಜ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.