Gudibande : ಗುಡಿಬಂಡೆಯ ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆ (General Meeting) ಯನ್ನು ಗುಡಿಬಂಡೆ ಪಟ್ಟಣ ಪಂಚಾಯಿತಿ (Town Panchayat) ಸಭಾಂಗಣದಲ್ಲಿ ಬಷೀರಾ ರಿಜ್ವಾನ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಸಲಾಯಿತು.
ಸಭೆಯಲ್ಲಿ 2022ರ ಆಗಸ್ಟ್‌ನಿಂದ ಅಕ್ಟೋಬರ್ ವರೆಗೆ ನಡೆದ ಜಮೆ-ಖರ್ಚು ಚರ್ಚಿಸಿ ಸಭೆಯಿಂದ ಅನುಮೋದನೆ ಪಡೆದು, ಪಟ್ಟಣ ಪಂಚಾಯಿತಿ ಕರ ವಸೂಲಿಗಾರರು, ಪೌರ ಕಾರ್ಮಿಕರರಿಗೆ ಪ್ರತಿ ತಿಂಗಳು ವೇತನ ನೀಡಲು ಆರ್ಥಿಕವಾಗಿ ಸದೃಢವಾಗಿದ ಹಿನ್ನೆಲೆಯಲ್ಲಿ ಆಡಳಿತ ವರ್ಗವು ಆದಾಯ ಹೆಚ್ಚಳಕ್ಕೆ ಅಗತ್ಯವಿರುವ ಕ್ರಮ ಕೈಗೊಳ್ಳಬೇಕು ಎಂಬ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ಮಾತನಾಡಿದ ಉಪಾಧ್ಯಕ್ಷ ಜಿ.ಎಂ. ಅನಿಲ್ ಕುಮಾರ್ “ಪಟ್ಟಣದ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ ಸ್ವಚ್ಛತೆಗೆ ಆದ್ಯತೆ ನೀಡಿ. ಬೇಸಿಗೆ ಆರಂಭವಾಗುವ ಮುನ್ನವೇ ಪೈಪ್‌ಲೈನ್‌ಗಳನ್ನು ಸರಿಪಡಿಸಿ ನೀರು ಪೋಲಾಗುವುದನ್ನು ತಡೆಯಬೇಕು. ಗುಡಿಬಂಡೆ ಬಸ್ ನಿಲ್ದಾಣದ ಮುಂಭಾಗದ ಉದ್ಯಾನವನದಲ್ಲಿ ಹಾವಳಿ ಭೈರೇಗೌಡ (Havali Byregowda) ರ ಪುತ್ಥಳಿ ಅನಾವರಣಕ್ಕೆ ಸಂಸದ ಬಿ.ಎನ್.ಬಚ್ಚೇಗೌಡ (B. N. Bache Gowda) ಪತ್ರ ಮುಖೇನ ಮನವಿ ಮಾಡಿದ್ದಾರೆ. ಆದರೆ, ಪುತ್ಥಳಿ ಅನಾವರಣ ಮಾಡುವ ಜಾಗವು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬರುವುದಿಲ್ಲ. ಈ ಮನವಿಯನ್ನು ತಹಶೀಲ್ದಾರರಿಗೆ ರವಾನಿಸಲಾಗಿದೆ” ಎಂದು ತಿಳಿಸಿದರು.
ಎಂಜಿನಿಯರ್ ಚಕ್ರಪಾಣಿ, ಮುಖ್ಯಾಧಿಕಾರಿ ಸಭಾ ಶಿರೀನಾ, ಕಿರಿಯ ಅರೋಗ್ಯ ನಿರೀಕ್ಷಕಿ ಶ್ವೇತಾ, ಎಲ್ಲ ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.