Gudibande : ನಗರಾಭಿವೃದ್ಧಿ ಇಲಾಖೆಯಿಂದ SFC ಯೋಜನೆಯಲ್ಲಿ ₹2 ಕೋಟಿ ಅನುದಾನ ಬಿಡುಗಡೆಯಾಗಿದ್ದು ಈ ಹಣದಲ್ಲಿ ಪಟ್ಟಣದಲ್ಲಿನ 11 ವಾರ್ಡು (Ward) ಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಪಟ್ಟಣ ಪಂಚಾಯಿತಿ (Town Panchayat) ಸಭಾಂಗಣದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಬಷೀರಾ ರಿಜ್ವಾನ್ ಅಧ್ಯಕ್ಷತೆಯಲ್ಲಿ ತುರ್ತು ಸಭೆ ಏರ್ಪಡಿಸಲಾಗಿತ್ತು. ಸಮಯಕ್ಕೆ ಆಗಮಿಸದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ (Congress) ಐವರು ಸದಸ್ಯರು ಸಭೆಯಿಂದ ಹೊರ ನಡೆದರು. ನಂತರ ಮಧ್ಯಾಹ್ನ 12 ಗಂಟೆಗೆ ಇಂಜಿನಿಯರ್ ಚಕ್ರಪಾಣಿ, ಅಧ್ಯಕ್ಷರು, ಉಪಾಧ್ಯಕ್ಷ, ಆಡಳಿತ ಪಕ್ಷದ ಚುನಾಯಿತ ಐವರು ಸದಸ್ಯರು ಹಾಗೂ ಮೂವರು ನಾಮನಿರ್ದೇಶಿತ ಸದಸ್ಯರ ಸಮುಖುದಲ್ಲಿ ಸಭೆ ನಡೆಯಿತು.
ಈ ವೇಳೆ ಮಾತನಾಡಿದ ಇಂಜಿನಿಯರ್ ಚಕ್ರಪಾಣಿ “ಎಸ್.ಎಫ್.ಸಿ ಯೋಜನೆಯಲ್ಲಿ ನಗರಾಭಿವೃದ್ಧಿ ಇಲಾಖೆಯಿಂದ ₹200 ಲಕ್ಷ ಅನುದಾನ ಬಿಡುಗಡೆಯಾಗಿದ್ದು ಅನುಮೋದನೆಯ ಜತೆಗೆ ಕ್ರಿಯಾಯೋಜನೆಯನ್ನು ತಯಾರಿಸಬೇಕು. ಮುಖ್ಯವಾಗಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲು ಸದಸ್ಯರಿಂದ ವಿವರವನ್ನು ನೀಡಬೇಕು. ಹಾಗೆಯೇ 15 ನೇ ಹಣಕಾಸು ಯೋಜನೆಯಲ್ಲಿ ₹59 ಲಕ್ಷ ಅನುದಾನದಲ್ಲಿ ಕ್ರಿಯಾಯೋಜನೆ ಸಿದ್ಧವಾಗಿದ್ದು, ಇದರ ಜತೆಗೆ 23 ಅನುದಾನದಲ್ಲಿ ಎಸ್.ಇ.ಪಿ.ಟಿಎಸ್.ಪಿ. ಶೇ 7.5 ಯೋಜನೆಗಳಿಗೆ ಮೀಸಲು ಮಾಡಿ ಉಳಿದ ಹಣದಲ್ಲಿ ₹ 5.40 ಲಕ್ಷ ಹಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಅಭಿವೃದ್ಧಿಗೆ ಕ್ರಿಯಾಯೋಜನೆಯನ್ನು ಸಿದ್ಧಪಡಿಸಲಾಗುವುದು” ಎಂದು ತಿಳಿಸಿದರು.
ಸಭೆಯಲ್ಲಿ ಮುಖ್ಯವಾಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಯಿ (Street Dogs) ಗಳ ಹಾವಳಿ ಹೆಚ್ಚಾಗಿದ್ದು ಇದನ್ನು ತಡೆಯಲು, ನಾಯಿ ಸಾಗಾಣಿಕೆ ಕೇಂದ್ರವನ್ನು ತೆರೆಯಲು, ಮಾರುತಿ ವೃತ್ತಾ, ಸುರಸದ್ಮಗಿರಿ ಬೆಟ್ಟದಲ್ಲಿನ ಹೈಮಾಸ್ಟ್ ದೀಪಗಳನ್ನು ಅಭಿವೃದ್ದಿ ಪಡಿಸುವುದು,ಇಂದಿರಾ ಕ್ಯಾಂಟೀನ್ (Indira Canteen) ನಿಂದ ಬರುವ ತ್ಯಾಜ್ಯ ನೀರಿಗೆ ಚರಂಡಿ ನಿರ್ಮಾಣ, ಸಂತೇಮೈದಾನದಲ್ಲಿನ ಊರುಭಾಗಿಲು ಉಪ್ಪುನೀರು ಅಂಜನೇಯ ಸ್ವಾಮಿ ಕಲ್ಯಾಣಿ, ಗ್ರಾಮ ದೇವತೆ ಏಡುಗರ ಅಕ್ಕಮ್ಮದೇವಾಲಯದ ಬಳಿ ಇರುವ ಕಲ್ಯಾಣಿ ಅಭಿವೃದ್ಧಿ, ರಾಮಪಟ್ಟಣ ವೃತ್ತದಲ್ಲಿ ಚರಂಡಿ, ಬೀದಿ ವ್ಯಾಪ್ಯಾರಿಗಳಿಗಾಗಿ ಡೇಲ್ಮಾ ಯೋಜನೆಯಲ್ಲಿ ನಿರ್ಮಾಣ ಮಾಡಿರುವ ಅಂಗಡಿ ಮಳಿಗೆಗಳನ್ನು ಫಲಾನುಭವಿಗಳಿಗೆ ನೀಡುವುದು. ಜತೆಗೆ ಪಟ್ಟಣದ ವ್ಯಾಪ್ತಿಯಲ್ಲಿ 14 ಉದ್ಯಾನವನಗಳಿದ್ದು ಅಧಿಕಾರಿಗಳ ನಿರ್ಲಕ್ಷತೆಯಿಂದ ಗಿಡಮರಗಳು ಬೆಳೆದು ವನಗಳಾಗಿದ್ದು ಇದನ್ನು ದುರುಸ್ತಿ ಮಾಡ ಬೇಕು ಎಂದು ಸದಸ್ಯರು ಪ್ರಸ್ತಾಪ ಮಾಡಿ ಒತ್ತಾಯಿಸಿದರು.
ಮುಖ್ಯಾಧಿಕಾರಿ ರಾಜಶೇಖರ್, ಉಪಾಧ್ಯಕ್ಷ ಜಿ.ಎಂ.ಅನಿಲ್ ಕುಮಾರ್, ಸದಸ್ಯರಾದ ಎಂ.ರಾಜೇಶ, ಎ.ವಿಕಾಸ್, ಅನೂಷ್, ಜಿ.ಗಂಗರಾಜು, ಬಷೀರ್ ಅಹಮದ್, ಇಸ್ಮಾಯಿಲ್ ಅಜಾದ್, ವೀಣಾ ನಿತಿನ್, ನಗೀಸ್ ತಾಜ್, ಕೆ.ಎನ್.ಮಂಜುಳ, ಸರ್ಕಾರದ ನಾಮಿನಿ ಸದಸ್ಯರಾದ ಜಿ.ಎಲ್.ಮಂಜುನಾಥ ನಾಯ್ದು,ಸಿ.ಅರ್.ಮಂಜುನಾಥ, ಎಸ್.ಪದ್ಮಾವತಿ, ಪಟ್ಟಣ ಪಂಚಾಯ್ತಿ ಸಿಬ್ಬಂದಿವರ್ಗ ಬಾಲಪ್ಪ ಮತ್ತಿತರರು ಉಪಸ್ಥಿತರಿದ್ದರು.