Gudibande : ಮನೆ ಕುಸಿದು ಇಬ್ಬರು ಗಾಯಗೊಂಡಿರುವ ಘಟನೆ ಗುಡಿಬಂಡೆ ತಾಲ್ಲೂಕಿನ ಪೋಲಂಪಲ್ಲಿಯಲ್ಲಿ ಶನಿವಾರ ಬೆಳಿಗ್ಗೆ ನಡೆದ್ದಿದ್ದು, ಗುಡಿಬಂಡೆ ತಾಲ್ಲೂಕಿನಾದ್ಯಂತ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಇಲ್ಲಿಯವರೆಗೆ ಒಟ್ಟು 9 ಮನೆಗಳು ಕುಸಿದು ಬಿದ್ದಿವೆ ಎನ್ನಲಾಗಿದೆ.
ಪೋಲಂಪಲ್ಲಿ ಗ್ರಾಮದ ವೆಂಕಟನರಸಮ್ಮ ಎಂಬುವವರ ಮನೆಯ ಮಾಳಿಗೆ ಮಳೆಗೆ ನೆನೆದು ಕುಸಿದಿದೆ . ಈ ವೇಳೆ ಮನೆಯಲ್ಲಿದ್ದ ವೆಂಕಟನರಸಮ್ಮ (55), ವೆಂಕಟಲಕ್ಷ್ಮಮ್ಮ (27) ಎಂಬುವವರಿಗೆ ಗಂಭೀರವಾದ ಗಾಯಗಳಾಗಿದ್ದು, ಅವರನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಗಾಯಾಳುಗಳಿಗೆ ₹10 ಸಾವಿರ ನೀಡಿ, ವೆಂಕಟನರಸಮ್ಮ ಅವರಿಗೆ 2 ತಿಂಗಳೊಳಗೆ ಮನೆ ನಿರ್ಮಿಸಿಕೊಡುವುದಾಗಿ ಮತ್ತು ಆಸ್ಪತ್ರೆ ಖರ್ಚುಗಳನ್ನು ಸರ್ಕಾರದಿಂದ ಕೊಡಿಸಿಕೊಡುವುದಾಗಿ ಭರವಸೆ ನೀಡಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕರು, ಗುಡಿಬಂಡೆ ತಾಲ್ಲೂಕಿನಾದ್ಯಂತ ಈ ಬಾರಿ ಉತ್ತಮ ಮಳೆಯಾಗುತ್ತಿರುವುದರಿಂದ ಹಳೆಯ ಮನೆಗಳು ನೀರಿನಲ್ಲಿ ನೆನೆದು ಕುಸಿದು ಬೀಳುವ ಪರಿಸ್ಥಿತಿಯಲ್ಲಿವೆ. ಇಂತಹ ಮನೆಗಳನ್ನು ಹೊಂದಿರುವವರು ಕೂಡಲೇ ತಹಶೀಲ್ದಾರರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ಘಟನಾ ಸ್ಥಳಕ್ಕೆ ತಹಶೀಲ್ದಾರ್ ಸಿಗ್ಬತ್ತುಲ್ಲಾ, ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಪ್ರತಾಪ್, ಮುಖಂಡ ಮಂಜುನಾಥ್, ಚನ್ನರಾಯಪ್ಪ, ಭೀಮಪ್ಪ, ನರೇಂದ್ರ ಸೇರಿದಂತೆ ಪೋಲಂಪಲ್ಲಿ ಗ್ರಾಮಸ್ಥರು ಧಾವಿಸಿದ್ದರು.