Chikkaballapur : ಐದು ವರ್ಷದೊಳಗಿನ ಎಲ್ಲಾ ಮಕ್ಕಳು ಮತ್ತು ಮಾರಣಾಂತಿಕ ಕಾಯಿಲೆಗಳಿಗೆ ಲಸಿಕೆಗಳನ್ನು ಪಡೆಯದ ಗರ್ಭಿಣಿಯರಿಗೆ ಲಸಿಕೆಗಳನ್ನು ನೀಡುವ ಉದ್ದೇಶದಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಂದ್ರಧನುಷ್ ಅಭಿಯಾನ 5.0 (Indradhanush Abhiyan 5.0) ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಚಾಲನೆ (inauguration) ನೀಡಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಗುರುವಾರ ರಾಷ್ಟ್ರೀಯ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ತೀವ್ರತರ ಮಿಷನ್ ಇಂದ್ರ ಧನುಷ್ 5.0 ಕಾರ್ಯಕ್ರಮ ಜಾರಿಗೊಳಿಸುವ ನಿಟ್ಟಿನಲ್ಲಿ ಚರ್ಚಿಸಲು ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, 2023 ರ ಅಂತ್ಯದ ವೇಳೆಗೆ ದಡಾರ ಮತ್ತು ರುಬೆಲ್ಲಾವನ್ನು ತೊಡೆದುಹಾಕುವುದು ಕಾರ್ಯಕ್ರಮದ ಗುರಿಯಾಗಿದೆ. ಈ ರೋಗಗಳ ವಿರುದ್ಧ ಲಸಿಕಾ ಪ್ರಕ್ರಿಯೆ ಹಾಗೂ ಪಿಸಿವಿ 3ನೇ ಡೋಸ್ ಲಸಿಕಾ ಪ್ರಕ್ರಿಯೆ ವೇಗ ಹೆಚ್ಚಿಸಲು ಅಭಿಯಾನ ಹಮ್ಮಿಕೊಳ್ಳಲಾಗಿದೆ ಮತ್ತು ಈ ಲಸಿಕೆ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ದೂರವಾಣಿ ಸಂಖ್ಯೆ: 8277892422 ನ್ನು ಸಂಪರ್ಕಿಸಬಹುದು. ಎಂದು ತಿಳಿಸಿದರು.
ಲಸಿಕೆ ಅಭಿಯಾನವು ಆಗಸ್ಟ್ (7 ರಿಂದ 12 ರವರೆಗೆ), ಸೆಪ್ಟೆಂಬರ್ (11 ರಿಂದ 16 ರವರೆಗೆ), ಮತ್ತು ಅಕ್ಟೋಬರ್ (9 ರಿಂದ 14 ರವರೆಗೆ) ಮೂರು ಸುತ್ತುಗಳಲ್ಲಿ ನಡೆಯುತ್ತದೆ. ಪ್ರತಿ ತಿಂಗಳು ಆರು ದಿನಗಳ ಕಾಲ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವುದು ಅತ್ಯಗತ್ಯ.
ಇಂದ್ರಧನುಷ್ 5.0 ಯಶಸ್ಸನ್ನು ಖಚಿತಪಡಿಸಿಕೊಳ್ಳಲು, ಹಳ್ಳಿಗಳು ಮತ್ತು ಕೊಳೆಗೇರಿ ಪ್ರದೇಶಗಳಲ್ಲಿ ಜಾಗೃತಿ ಮೂಡಿಸುವುದು ಮುಖ್ಯವಾಗಿದೆ. ಲಸಿಕೆ ನೀಡುವ ಆಶಾ ಕಾರ್ಯಕರ್ತೆಯರನ್ನು ಆರೋಗ್ಯ ಅಧಿಕಾರಿಗಳು ಗುರುತಿಸುತ್ತಾರೆ. ಯಾವುದೇ ಅಡ್ಡ ಪರಿಣಾಮಗಳನ್ನು ತಪ್ಪಿಸಲು ಲಸಿಕೆ ನೀಡುವ ಮೊದಲು ಮಕ್ಕಳ ಆರೋಗ್ಯವನ್ನು ಪರಿಶೀಲಿಸಲಾಗುತ್ತದೆ.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ.ನಿಟ್ಟಾಲಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ್ ಕುಮಾರ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಯಲ್ಲ ರಮೇಶ್ ಬಾಬು, ಜಿಲ್ಲಾ ಸಾಂಕ್ರಾಮಿಕ ರೋಗ ನಿಯಂತ್ರಣಾಧಿಕಾರಿ ಡಾ.ಪ್ರಕಾಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.