Anur, Sidlaghatta : ಕೇಂದ್ರದ ಹಣಕಾಸು ಇಲಾಖೆಯ ಜಂಟಿ ಕಾರ್ಯದರ್ಶಿ ಸಮೀರ್ ಶುಕ್ಲ ನೇತೃತ್ವದ ಅಧಿಕಾರಿಗಳ ತಂಡ ಶಿಡ್ಲಘಟ್ಟ ತಾಲ್ಲೂಕು ಆನೂರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ನರೇಗಾ ಹಾಗೂ ಜಲ ಶಕ್ತಿ, ಜಲ ಜೀವನ್ ಯೋಜನೆಯ ಕಾಮಗಾರಿಗಳನ್ನು ವೀಕ್ಷಿಸಿದರು.
ಆನೂರು ಗ್ರಾಮಪಂಚಾಯಿತಿ ಕೇಂದ್ರ ಸ್ಥಾನದಲ್ಲಿನ ಮಾದರಿ ಅಂಗನವಾಡಿ ಕೇಂದ್ರ, ಡಿಜಿಟಲ್ ಲೈಬ್ರರಿ, ಹಿತ್ತಲಹಳ್ಳಿಯ ಶುದ್ಧ ಕುಡಿಯುವ ನೀರಿನ ಘಟಕ, ಬೆಳ್ಳೂಟಿ ಕೆರೆಯಲ್ಲಿನ ನಡುಗಡ್ಡೆಯಲ್ಲಿ ನಾಟಿದ ಸಸಿಗಳು, ತಾದೂರು ಬಳಿ ರಸ್ತೆ ಬದುಗಳಲ್ಲಿ ಬೆಳೆಸಿದ ಸಸಿಗಳನ್ನು ವೀಕ್ಷಿಸಿದರು.
ಈ ವೇಳೆ ಮಾತನಾಡಿದ ಸಮೀರ್ ಶುಕ್ಲ ಅವರು, ಕೇಂದ್ರದ ನರೇಗಾ ಹಾಗೂ ಜಲ ಶಕ್ತಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಸ್ಥಿತಿ ಗತಿಗಳನ್ನು ವೀಕ್ಷಿಸಿ ಕೇಂದ್ರಕ್ಕೆ ವರದಿ ನೀಡಲು ಭೇಟಿ ನೀಡಿದ್ದು ಇದು ಸಹಜ ಪ್ರಕ್ರಿಯೆ ಎಂದರು.
ಈ ಭಾಗದಲ್ಲಿ ನೀರಿನ ಲಭ್ಯತೆ ಪ್ರಮಾಣ ಕಡಿಮೆ ಇದ್ದರೂ ಆ ನೀರನ್ನು ಹಿಡಿದಿಟ್ಟು ಭೂಮಿಗೆ ಇಂಗಿಸುವ ಮತ್ತು ಸಿಗುವ ನೀರಿನ ಸದ್ಬಳಕೆ ಇತರರಿಗೂ ಮಾದರಿಯಾಗುವಂತೆ ಕಾಣುತ್ತಿದೆ. ಇದನ್ನೇ ವರದಿ ಮಾಡುತ್ತೇವೆ ಎಂದು ಹೇಳಿದರು.
ಇನ್ನು ಜಲಶಕ್ತಿ ಯೋಜನೆಯನ್ನು ಕೆಲ ಭಾಗದಲ್ಲಿ ಆರಂಭಿಸಿದ್ದು ಮತ್ತೆ ಕೆಲ ಭಾಗದಲ್ಲಿ ಇನ್ನೂ ಆರಂಭಿಸುವ ಹಂತದಲ್ಲಿದೆ. ನರೇಗಾ ಯೋಜನೆಯನ್ನು ಈ ಭಾಗದಲ್ಲಿ ಹೆಚ್ಚು ಸದ್ಬಳಕೆ ಮಾಡಿಕೊಂಡಿರುವುದು ಎದ್ದು ಕಾಣುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಪಂಚಾಯತ್ ರಾಜ್ ಇಲಾಖೆಯ ಎಎ ರಮೇಶ್, ಅರಣ್ಯ ಇಲಾಖೆಯ ಎಸಿಎಫ್ ಮುನಿಕೃಷ್ಣಪ್ಪ, ಆರ್.ಎಫ್.ಒ ನಾಗಾರ್ಜುನ್, ಆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಿತ್ತಲಹಳ್ಳಿ ವೆಂಕಟೇಶ್, ಸದಸ್ಯ ಪರಿಸರ ಪ್ರೇಮಿ ಬೆಳ್ಳೂಟಿ ಸಂತೋಷ್, ವಿಶ್ವಾಸ್, ಸುರೇಶ್ ಹಾಜರಿದ್ದರು.