Chikkaballapur : ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಕಡೇ ಕಾರ್ತಿಕ ಸೋಮವಾರವನ್ನು (Kade Karthika Somavara) ಭಕ್ತರು ಶ್ರದ್ಧಾಭಕ್ತಿಯಿಂದ ದೇಗುಲಗಳ ಬಳಿ ದೀಪ ಹಚ್ಚುವ ಮೂಲಕ ಆಚರಿಸಲಾಯಿತು.
ತಾಲ್ಲೂಕಿನ ನಂದಿ ಗ್ರಾಮದಲ್ಲಿರುವ ಭೋಗ ನಂದೀಶ್ವರ ದೇವಸ್ಥಾನ, ನಗರದ ಎಂ.ಜಿ. ರಸ್ತೆಯಲ್ಲಿರುವ ಮರುಳಸಿದ್ದೇಶ್ವರ, ಕಂದವಾರ ಬಾಗಿಲು ರಸ್ತೆಯ ವೆಂಕಟರಮಣ ಸ್ವಾಮಿ, ಕೋಟೆ ಚನ್ನಕೇಶವ ಸ್ವಾಮಿ, ವರಸಿದ್ಧಿ ವಿನಾಯಕ ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ನಂದಿ ದೇವಾಲಯದಲ್ಲಿ ನೂತನ ರಥದ ರಥೋತ್ಸವ ನಡೆಸಲಾಯಿತು.
ಗೌರಿಬಿದನೂರು :
ಗೌರಿಬಿದನೂರು ನಗರದ ಹಿರೇಬಿದನೂರಿನಲ್ಲಿರುವ ರಾಮಲಿಂಗೇಶ್ವರ ರಥೋತ್ಸವವು ಕಾರ್ತಿಕ ಮಾಸದ ಕೊನೆಯ ಸೋಮವಾರ ವಿಜೃಂಭಣೆಯಿಂದ ನಡೆಯಿತು.
ಚಿಂತಾಮಣಿ :
ಚಿಂತಾಮಣಿ ನಗರ ಹಾಗೂ ತಾಲ್ಲೂಕಿನಾದ್ಯಂತ ಕಡೇ ಕಾರ್ತಿಕ ಸೋಮವಾರವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಜನರು ಬೆಳಗ್ಗೆಯಿಂದಲೇ ಸಡಗರ ಸಂಭ್ರಮದಿಂದ ದೇಗುಲಗಳತ್ತ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.