Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಅಂಕತಟ್ಟಿ ಗೇಟ್ (Ankatatti Gate) ಬಳಿಯ S N Farm ನಲ್ಲಿ “ಕೃಂಬಿಗಲ್ ಕುಟೀರ” (Krumbiegel Kuteera) ಭಾನುವಾರ ಲೋಕಾರ್ಪಣೆಗೊಂಡಿತು. ತೋಟಗಾರಿಕೆ ಪಿತಾಮಹ ಕೃಂಬಿಗಲ್ ಹೆಸರಿನಲ್ಲಿ ಸ್ಥಾಪನೆಗೊಂಡ ಈ ಕುಟೀರವನ್ನು ಕೃಂಬಿಗಲ್ ಅವರ ಶೈಲಿಯಲ್ಲಿಯೇ ನಿರ್ಮಿಸಿದ್ದು, ಇಲ್ಲಿ ತೋಟಗಾರಿಕಾ ಬೆಳೆಗಳ ಕುರಿತಾಗಿ ಕಾರ್ಯಕ್ರಮಗಳನ್ನು ಆಯೋಜಿಸುವ ಕೇಂದ್ರವನ್ನಾಗಿಸುವ ಉದ್ದೇಶವಿದೆ. ಕಂಬಿಗಲ್ ಅವರು ರಾಜ್ಯದ ಹಲವೆಡೆ ಗಜೆಬೊ ಅಥವಾ ಪರ್ಗೋಲಾ ಎಂಬ ಆಕೃತಿಯಲ್ಲಿ ವಿನ್ಯಾಸ ಮಾಡಿ ನಿರ್ಮಿಸಿರುವ ಆಕೃತಿಯಲ್ಲಿಯೇ ಇಲ್ಲಿ ಕುಟೀರವನ್ನು ನಿರ್ಮಿಸಲಾಗಿದೆ.
“ಭಕ್ತರಹಳ್ಳಿಯ ನನ್ನ ಬಾಲ್ಯದ ನೆನಪುಗಳಲ್ಲಿ ಒಂದಾಗಿದ್ದ ಸ್ತಂಭಗಳ ವಿನ್ಯಾಸಕ ಕೃಂಬಿಗಲ್ ಎಂಬುದು ತಿಳಿದೊಡನೆಯೇ ಅವರ ಕುರಿತಂತೆ ಅಧ್ಯಯನ ಕೈಗೊಂಡೆ. ಬ್ರಿಟಿಷ್ ಆಳ್ವಿಕೆಯ ಭಾರತದಲ್ಲಿ ಬ್ರಿಟಿಷರ ವಿರೋಧಿಗಳಾಗಿದ್ದ ಜರ್ಮನ್ ಮೂಲದ ಈ ಮನುಷ್ಯ ಹೇಗೆ ನಮ್ಮ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ ಎಂಬ ಕುತೂಹಲದಿಂದ ಕೃಂಬಿಗಲ್ ಬಗ್ಗೆ ತಿಳಿಯುತ್ತಾ ಹೋದಂತೆ ಅವರ ಬಗ್ಗೆ ಗೌರವ ಇಮ್ಮಡಿಸಿತು. ತೋಟಗಾರಿಕಾ ನಿರ್ದೇಶಕ, ಸಸ್ಯಶಾಸ್ತ್ರಜ್ಞ, ಭೂದೃಶ್ಯ ಹಾಗೂ ನಗರದ ವಿನ್ಯಾಸಕಾರ, ವಾಸ್ತುಶಿಲ್ಪಿ, ಫಲೋದ್ಯಾನ ರೂಪಿಸುವವ ಮತ್ತು ಸಸ್ಯ ಸಂರಕ್ಷಕರಾಗಿ ಕೃಂಬಿಗಲ್ ನಮ್ಮ ನಾಡಿಗೆ ಸಲ್ಲಿಸಿರುವ ಸೇವೆ ಅನುಪಮವಾದದ್ದು. ಅವರ ನೆನಪಿನಲ್ಲಿ ನಾವೊಂದಷ್ಟು ಕೆಲಸ ಮಾಡಬೇಕೆಂಬ ಹಂಬಲದಿಂದ ಈ ಕುಟೀರವನ್ನು ನಿರ್ಮಾಣ ಮಾಡಿದೆ” ಎಂದು ಸಂತೆ ನಾರಾಯಣಸ್ವಾಮಿ ಅವರು ವಿವರಿಸುತ್ತಾರೆ.
“2014 ರಲ್ಲಿ, ಭಾರತ ಮತ್ತು ಜರ್ಮನಿಯ ಜಂಟಿ ಸಹಭಾಗಿತ್ವದಲ್ಲಿ, ಕೃಂಬಿಗಲ್ ಅವರ ಜನ್ಮಸ್ಥಳ ಜರ್ಮನಿಯ ಡ್ರೆಸ್ಡೆನ್ ನಗರದಲ್ಲಿ ಕೃಂಬಿಗಲ್ ಅವರ 150 ವರ್ಷದ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕೃಂಬಿಗಲ್ ಅವರು ನಮ್ಮ ರಾಜ್ಯ ಮತ್ತು ಬೆಂಗಳೂರಿಗೆ ನೀಡಿರುವ ಅನುಪಮ ಸೇವೆಯ ಬಗ್ಗೆ ಕಾರ್ಯಕ್ರಮದಲ್ಲಿ ಮಾತನಾಡಿದೆ. 2017 ರಲ್ಲಿ ಕೃಂಬಿಗಲ್ ಅವರ ಮೊಮ್ಮಗಳು ಆಲಿಯಾ ಸಹ ಭಕ್ತರಹಳ್ಳಿಗೆ ಭೇಟಿ ನೀಡಿದ್ದರು” ಎಂದು ಸಂತೆ ನಾರಾಯಣಸ್ವಾಮಿ ತಿಳಿಸಿದರು.
ಹಿರಿಯ ತೋಟಗಾರಿಕಾ ತಜ್ಞ ಡಾ. ಎಸ್.ವಿ. ಹಿತ್ತಲಮನಿ ಮಾತನಾಡಿ, ಜರ್ಮನಿಯವರಾದ ಗುಸ್ಟಾವ್ ಹರ್ಮನ್ ಕೃಂಬಿಗಲ್ ನಮ್ಮ ರಾಜ್ಯ ಹಾಗೂ ದೇಶಕ್ಕೆ ನೀಡಿರುವ ಕೊಡುಗೆ ಅಪಾರವಾದದ್ದು. ಲಂಡನ್ನಿನ ಕ್ಯೂಗಾರ್ಡನ್ನಿನಲ್ಲಿ ತರಬೇತಿ ಪಡೆದು ಬರೋಡ ಸಂಸ್ಥಾನದಲ್ಲಿ ಉದ್ಯಾನಗಳನ್ನು ಅವರು ಅಭಿವೃದ್ಧಿಪಡಿಸಿದ್ದರು. ಮೈಸೂರು ಮಹಾರಾಜರಾದ ಕೃಷ್ಣರಾಜ ಒಡೆಯರ್ ಕೃಂಬಿಗಲ್ ರ ಕೆಲಸವನ್ನು ಮೆಚ್ಚಿ ಮೈಸೂರಿಗೆ ಆಹ್ವಾನಿಸಿದರು. ಲಾಲ್ ಬಾಗ್, ಸರ್ಕಾರಿ ತೋಟಗಳು, ರಾಜರ ಅರಮನೆ ತೋಟಗಳ ಅಧೀಕ್ಷಕರಾಗಿ 1908 ರಲ್ಲಿ ಸೇವೆಯನ್ನು ಪ್ರಾರಂಭಿಸಿ 1932 ರಲ್ಲಿ ತೋಟಗಾರಿಕೆ ನಿರ್ದೇಶಕರಾಗಿ ನಿವೃತ್ತರಾದರು. 67 ವರ್ಷ ವಯಸ್ಸಾದ ಅವರನ್ನು ಮಹಾರಾಜರು ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡರು. ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಆಮಂತ್ರಣದ ಮೇರೆಗೆ ಸಲಹೆಗಾರರಾಗಿ ಸೇವೆ ಸಲ್ಲಿಸಿದರು. ಕನ್ನಂಬಾಡಿ ಕಟ್ಟೆಯ ಕೆಳಗಿನ “ಬೃಂದಾವನ ಉದ್ಯಾನವನ” ಕೂಡ ಇವರ ಕೊಡುಗೆಯೇ. ನಮ್ಮಲ್ಲಿದ್ದು ನಮ್ಮವಾರೇ ಆಗಿ ಹೋದ ಕೃಂಬಿಗಲ್ ಬೆಂಗಳೂರಿನಲ್ಲಿಯೇ ನಿಧನರಾದರು. ಬೆಂಗಳೂರಿನಲ್ಲಿ “ಕೃಂಬಿಗಲ್ ರಸ್ತೆ” ಅವರ ಹೆಸರನ್ನು ಅಜರಾಮರಗೊಳಿಸಿದೆ. ಇದೀಗ ಶಿಡ್ಲಘಟ್ಟ ತಾಲ್ಲೂಕಿನಲ್ಲಿನ ಕೃಂಬಿಗಲ್ ಕುಟೀರ ಅವರ ನೆನಪಿನಲ್ಲಿ ರೈತರಿಗೆ ಉಪಯುಕ್ತ ಕಾರ್ಯಕ್ರಮಗಳನ್ನು ಆಯೋಜಿಸಲಿದೆ ಎಂದರು.
ಬಿ.ಎಂ.ವಿ.ವಿದ್ಯಾಸಂಸ್ಥೆ ಕಾರ್ಯದರ್ಶಿ ಎಲ್.ಕಾಳಪ್ಪ, ಮೇಜರ್ ಟಿ.ನಾಗರಾಜ್, ಪ್ರಗತಿಪರ ರೈತ ಎನ್.ಸಿ.ಪಟೇಲ್, ಡಾ.ರವಿಕಲಾ ಕಾಳಪ್ಪ, ಗೋಪಾಲಗೌಡ ಕಲ್ವಮಂಜರಿ, ಡಿ.ಎನ್.ಸುದರ್ಶನ್ ರೆಡ್ಡಿ, ಗರಿಗರೆಡ್ಡಿ, ಡಾ.ಟಿ.ವಿ.ನಾಗರಾಜ್, ಡಾ.ಬಿ.ವಿ.ಕೃಷ್ಣಮೂರ್ತಿ, ಡಾ.ಮುನೇಗೌಡ, ಎಸ್.ವೆಂಕಟೇಶಪ್ಪ ಹಾಜರಿದ್ದರು.