Chikkaballapur : ಲೋಕಾಯುಕ್ತ ಎಸ್.ಪಿ ಆಂಟನಿ ಜಾನ್ ಹಾಗೂ ಡಿವೈಎಸ್‌ಪಿ ವೀರೇಂದ್ರ ಕುಮಾರ್ ನೇತೃತ್ವದ ತಂಡ ಚಿಕ್ಕಬಳ್ಳಾಪುರ ನಗರದ ಅಂಬೇಡ್ಕರ್ ಪದವಿ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಬಿ.ಆರ್. ಅಂಬೇಡ್ಕರ್ ವೃತ್ತಿಪರ ಬಾಲಕರ ಕಾಲೇಜು ವಿದ್ಯಾರ್ಥಿ ನಿಲಯ, ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ವ್ಯವಸ್ಥೆಗಳನ್ನು (Lokayukta Visit to Hostels) ಪರಿಶೀಲಿಸಿದರು.
ಅಂಬೇಡ್ಕರ್ ಪದವಿ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಬಿ.ಆರ್. ಅಂಬೇಡ್ಕರ್ ವೃತ್ತಿಪರ ಬಾಲಕರ ಕಾಲೇಜು ವಿದ್ಯಾರ್ಥಿ ನಿಲಯದಲ್ಲಿನ ಅವ್ಯವಸ್ಥೆಗೆ ಆಕ್ರೋಶ ವ್ಯಕ್ತಪಡಿಸಿದ ಎಸ್‌ಪಿ ಆಂಟನಿ ಜಾನ್, ಸ್ವಚ್ಛತೆ ನಿರ್ವಹಣೆ ಮಾಡಬೇಕು ಎಂದು ತಾಕೀತು ಮಾಡಿ ರುಚಿ ಮತ್ತು ಗುಣಮಟ್ಟವಿದೆಯೇ ಎಂದು ವಿದ್ಯಾರ್ಥಿಗಳಿಂದ ಮಾಹಿತಿ ಕಲೆ ಹಾಕಿದರು. ಆಹಾರ ಧಾನ್ಯಗಳ ಸಂಗ್ರಹ ಕೊಠಡಿ ಪರಿಶೀಲಿಸಿ ಮಕ್ಕಳಿಗೆ ಪುಳಿಯೊಗರೆ ಮತ್ತಿತರ ತಿಂಡಿಗಳನ್ನು ತಯಾರಿಸಿದ ವೇಳೆ ಚಟ್ನಿ ಅಥವಾ ಮೊಸರು ನೀಡಬೇಕು ಎಂದರು. ಅಧಿಕಾರಿಗಳು ಹಾಸ್ಟೆಲ್‌ಗಳಿಗೆ ನಿಯಮಿತವಾಗಿ ಭೇಟಿ ನೀಡುತ್ತಿದ್ದಾರೆಯೇ ಇಲ್ಲವೆ ಎನ್ನುವ ಬಗ್ಗೆ ರಿಜಿಸ್ಟಾರ್‌ಗಳನ್ನು ಪರಿಶೀಲಿಸಿದರು.
ದಾಳಿಯಲ್ಲಿ ಲೋಕಾಯುಕ್ತ ಸಿಬ್ಬಂದಿ ಗುರು, ನಾಗರಾಜು, ಲಿಂಗರಾಜು, ಜಯಮ್ಮ, ಸಂತೋಷ್, ರಾಮಚಂದ್ರ ಪಾಲ್ಗೊಂಡಿದ್ದರು.