Chikkaballapur : ಲೋಕಸಭೆ ಚುನಾವಣೆಯ (Lok Sabha Election) ದೃಷ್ಟಿಯಿಂದ ಪಕ್ಷವನ್ನು ಬೂತ್ ಮಟ್ಟದಿಂದ ಸಂಘಟಿಸಲು October 19ರಂದು ಬೆಳಿಗ್ಗೆ 11ಕ್ಕೆ ನಗರದ ಶ್ರೀದೇವಿ ಪ್ಯಾಲೆಸ್‌ನಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬೂತ್ ಮಟ್ಟದ ಅಧ್ಯಯನ ಶಿಬಿರ (Booth Level Workshop) ಹಮ್ಮಿಕೊಳ್ಳಲಾಗಿದೆ ಎಂದು ಚಿಕ್ಕಬಳ್ಳಾಪುರ ನಗರದಲ್ಲಿ ಸೋಮವಾರ ಮಾಜಿ ಸಂಸದ ಎಂ.ವೀರಪ್ಪ ಮೊಯಿಲಿ (M Veerappa Moily) ಸುದ್ದಿಗೋಷ್ಠಿ (Press Meet) ನಡೆಸಿ ತಿಳಿಸಿದರು.
ಸುದ್ಧಿಗೋಷ್ಠಿಯಲ್ಲಿ ಮಾತಾನಾಡಿದ ಎಂ.ವೀರಪ್ಪ ಮೊಯಿಲಿ “ಬೂತ್‌ಮಟ್ಟದ ಮುಖಂಡರು ಯಾವ ರೀತಿ ಕಾರ್ಯನಿರ್ವಹಿಸಬೇಕು, ಪಕ್ಷದ ಸೈದ್ಧಾಂತಿಕ ವಿಚಾರಗಳನ್ನು ಜನರಿಗೆ ಹೇಗೆ ತಲುಪಿಸಬೇಕು ಇತ್ಯಾದಿ ವಿಷಯಗಳು ಶಿಬಿರದಲ್ಲಿ ಚರ್ಚೆ ಆಗಲಿದ್ದು ಶಿಬಿರದಲ್ಲಿ ಜಿಲ್ಲೆಯ ಕಾಂಗ್ರೆಸ್ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಪಾಲ್ಗೊಳ್ಳುವರು. ಗೌರಿಬಿದನೂರು ಶಾಸಕ ಪುಟ್ಟಸ್ವಾಮಿಗೌಡರು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಹ ಸದಸ್ಯರಾಗಿದ್ದು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಾರೆ. ಆ ಬಗ್ಗೆ ಯಾವುದೇ ಆತಂಕಪಡುವುದು ಬೇಡ. ಕೆ.ಸಿ.ವ್ಯಾಲಿ ಮತ್ತು ಎಚ್.ಎನ್.ವ್ಯಾಲಿ ಯೋಜನೆಯ ನೀರು ಕುಡಿಯಲು ಅಲ್ಲ. ಅಂತರ್ಜಲ ವೃದ್ಧಿಯೇ ಈ ಯೋಜನೆಯ ಉದ್ದೇಶ” ಎಂದು ತಿಳಿಸಿದರು.
ಕೇಂದ್ರ ಬಿಜೆಪಿ ಸರ್ಕಾರಕ್ಕೆ ಮಾನವೀಯತೆ ಇಲ್ಲ. ವಿದೇಶಾಂಗ ನೀತಿ ವಿಚಾರದಲ್ಲಿ ಭಾರತ ತೀವ್ರ ವಿಫಲವಾಗಿದೆ. ಇಸ್ರೇಲ್–ಪ್ಯಾಲೆಸ್ಟೀನ್ (Israel Palestine war) ಮತ್ತು ರಷ್ಯಾ–ಉಕ್ರೇನ್ ಯುದ್ದ (Russia Ukraine war) ವಿಚಾರದಲ್ಲಿ ಸ್ಪಷ್ಟ ನೀತಿ ತಾಳಲು ವಿಫಲ ಆಗಿದ್ದೇವೆ. ಅಧಿಕಾರಕ್ಕೆ ಬರುವ ವೇಳೆ ಬಿಜೆಪಿಯವರು ಮಾಡುವ ನಾಟಕ ಈಗ ಜನರಿಗೆ ಅರ್ಥವಾಗಿದೆ. 2024ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದಿಂದ ತೊಲಗುತ್ತದೆ ಎಂದು ಮೊಯಿಲಿ ತಿಳಿಸಿದರು.
ಡಾ.ಕೆ.ಸುಧಾಕರ್ ಅವರು ಸೋಲಿನಿಂದ ಚೇತರಿಸಿಕೊಂಡಿಲ್ಲ. ಈ ಹಿಂದೆ ಮೊಯಲಿ ಅವರನ್ನು ನಂಬಿಯೇ ಡಾ.ಕೆ.ಸುಧಾಕರ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ನಮ್ಮನ್ನು ನಂಬಿ ಕಾಂಗ್ರೆಸ್‌ನಲ್ಲಿ ಇದ್ದರು. ಆದರೆ ಈಗ ಗೊಂದಲದಲ್ಲಿ ಇದ್ದಾರೆ. ಎಚ್.ಡಿ.ಕುಮಾರಸ್ವಾಮಿ ಫಲಿತಾಂಶಕ್ಕೂ ಮುನ್ನವೇ ಸಿಂಗಪುರಕ್ಕೆ ಹೋದರು. ಮುಖ್ಯಮಂತ್ರಿ ಆಗುವ ಆಸೆ ಹೊಂದಿದ್ದರು. ಈಗ ಅವರ ಪರಿಸ್ಥಿತಿ ಚಿಂತಾಜನಕವಾಗಿ ಹತಾಶೆಯಲ್ಲಿ ಇದ್ದಾರೆ ಎಂದು ಮಾಜಿ ಸಂಸದ ಮೊಯಿಲಿ ಹೇಳಿದರು.
ಸುದ್ಧಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಜಯರಾಂ, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಯಾಸ್ಮಿನ್ ತಾಜ್, ಮಹಿಳಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮಹಿಳಾ ಉಸ್ತುವಾರಿ ಮಮತಾಮೂರ್ತಿ, ಮುಖಂಡರಾದ ನಾರಾಯಣ ಸ್ವಾಮಿ, ಕೃಷ್ಣಪ್ಪ ಪಾಲ್ಗೊಂಡಿದ್ದರು.