Chikkaballapur : ಕೇಂದ್ರ ಸರ್ಕಾರದ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಒಂದು ವರ್ಷವಾಗುವ ಪ್ರಯುಕ್ತ ನ.26ರಂದು ಚದುಲಪುರ ಕ್ರಾಸ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ಮಾಡಲು ವಿವಿಧ ಸಂಘಟನೆಗಳು ಕರೆ ನೀಡಿವೆ.
ಮಂಗಳವಾರ ಚಿಕ್ಕಬಳ್ಳಾಪುರ ನಗರದಲ್ಲಿಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ” ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಬಂಡವಾಳಶಾಹಿಗಳ ಪರವಾಗಿದ್ದು ರೈತ, ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ. ಸೌಜನ್ಯಕ್ಕಾದರೂ ಪ್ರಧಾನಿ ಇಲ್ಲಿಯವರೆಗೂ ರೈತರ ಜತೆ ಮಾತುಕತೆ ನಡೆಸಲಿಲ್ಲ. ನವೆಂಬರ್ ೨೬ ರಂದು ದೆಹಲಿಯಲ್ಲಿ 500ಕ್ಕೂ ಹೆಚ್ಚು ಸಂಘಟನೆಗಳು ಹೋರಾಟ ಹಮ್ಮಿಕೊಂಡಿದ್ದು ಅವರಿಗೆ ಬೆಂಬಲ ಸೂಚಿಸಲು ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಮತ್ತು ನಗರ ಜಿಲ್ಲೆಯ ವಿವಿಧ ಸಂಘಟನೆಗಳು ನವೆಂಬರ್ ೨೬ ರ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಕೃಷಿಗೆ ಸಂಬಂಧಿಸಿದ ಎಲ್ಲ ವಸ್ತುಗಳನ್ನು ಹೆದ್ದಾರಿಯಲ್ಲಿ ಇಟ್ಟು, ಹೆದ್ದಾರಿ ತಡೆ ನಡೆಸುತ್ತೇವೆ ” ಎಂದು ಹೇಳಿದರು
ನವದೆಹಲಿಯಲ್ಲಿ ಚಳಿ, ಮಳೆ,ಬಿಸಿಲನ್ನು ಲೆಕ್ಕಿಸದೆ ಹೋರಾಟ ನಡೆಸಿ 600ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ. ಕಾರ್ಪೊರೇಟ್ ಕಂಪನಿಗಳ ಹಿತ ಕಾಪಾಡಲು ರೈತರ ಹಿತವನ್ನು ಸರ್ಕಾರ ಬಲಿಕೊಡುತ್ತಿದೆ. ಸರ್ಕಾರ ವಿರುದ್ಧದ ಈ ಹೋರಾಟದಲ್ಲಿ ಹೆಚ್ಚು ಜನರು ಪಾಲ್ಗೊಳ್ಳಬೇಕು ಎಂದು ಸಿಐಟಿಯು ಮುಖಂಡ ಸಿದ್ದಗಂಗಪ್ಪ ಮನವಿ ಮಾಡಿಕೊಂಡರು.
ಪ್ರಜಾ ಸಂಘರ್ಷ ಸಮಿತಿಯ ಚನ್ನರಾಯಪ್ಪ, ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಮುನಿಕೃಷ್ಣಪ್ಪ, ರೈತ ಸಂಘದ ವೆಂಕಟಸ್ವಾಮಿ, ಮುನಿಕೆಂಪಣ್ಣ, ರವಿಕುಮಾರ್, ಲೋಕೇಶ್‌ಗೌಡ, ರಾಮಾಂಜನಪ್ಪ, ಮುನಿನಂಜಪ್ಪ, ನಾರಾಯಣಸ್ವಾಮಿ, ರಾಮೇಗೌಡ, ಉದಯ್‌ಕುಮಾರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.