Varadanayakanahalli, Sidlaghatta : ಒಂದೆಡೆ ವಿದ್ಯಾರ್ಥಿಗಳಿಗೆ ಗಿಡಮರಗಳೊಂದಿಗೆ ಬಾಂಧವ್ಯ ಬೆಸೆಯುತ್ತಾ ಮತ್ತೊಂದೆಡೆ ಸರ್ಕಾರಿ ಶಾಲೆಗಳಲ್ಲಿ ಹಸುರು ವಾತಾವರಣವನ್ನು ಸೃಷ್ಟಿಸುವ ವಿನೂತನ “ಸಸ್ಯ ಶ್ಯಾಮಲ” ಕಾರ್ಯಕ್ರಮ ಯಶಸ್ವಿಯಾಗಲು ಎಲ್ಲರೂ ಕೈಜೋಡಿಸಿ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ವರದನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಶಿಕ್ಷಣ ಇಲಾಖೆ ಮತ್ತು ಸಾಮಾಜಿಕ ಅರಣ್ಯ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ “ಸಸ್ಯ ಶ್ಯಾಮಲ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಡ್ಲಘಟ್ಟ ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ಸುಮಾರು ನಾಲ್ಕು ಸಾವಿರ ಗಿಡಗಳನ್ನು ಒಂದು ವಾರದಲ್ಲಿ ನೆಡುವ ಯೋಜನೆ ಯಶಸ್ವಿಯಾಗಬೇಕಾದರೆ ಕನಿಷ್ಠ ಮೂರು ವರ್ಷಗಳ ಕಾಲ ನೆಟ್ಟ ಗಿಡಗಳನ್ನು ಕಾಪಾಡಿಕೊಳ್ಳಬೇಕು. ಅರಣ್ಯ ಇಲಾಖೆಯವರು ಉತ್ತಮ ಗಿಡಗಳನ್ನು ಕೊಡುತ್ತಾರೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಅವನ್ನು ಚೆನ್ನಾಗಿ ಪೋಷಿಸುವ ಮೂಲಕ ಒಳ್ಳೆಯ ಪರಿಸರ ನಿರ್ಮಾಣಕ್ಕೆ ಕಾರಣರಾಗಬೇಕೆಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಶಾಲೆಯ ಆವರಣದಲ್ಲಿ ಒಂದೊಂದು ಗಿಡ ದತ್ತು ನೀಡುವ ಮೂಲಕ ಅವರಿಂದಲೇ ಗಿಡವನ್ನು ಪೋಷಿಸಲು ಶಿಕ್ಷಕರು ನೆರವಾಗಬೇಕು. ಸರ್ಕಾರಿ ಶಾಲೆಗಳು ಹಸುರಿನ ನಡುವೆ ಇರುವಂತೆ ರೂಪಿಸಿಕೊಳ್ಳಬೇಕು. ಮಕ್ಕಳಿಗೆ ಸಸ್ಯಗಳ ಬಗ್ಗೆ ಜ್ಞಾನ ಮತ್ತು ಹಸುರೀಕರಣದ ಉಪಯೋಗಗಳ ಬಗ್ಗೆ ಸ್ವಯಂ ತಿಳಿಯಲು ಈ ಯೋಜನೆಯನ್ನು ಚೆನ್ನಾಗಿ ಬಳಕೆ ಮಾಡಿಕೊಳ್ಳುವಂತೆ ಹೇಳಿದರು.
ಮುಖ್ಯ ಶಿಕ್ಷಕ ಜಿ.ವೆಂಕಟೇಶ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ಬಾರೆಡ್ಡಿ, ತಾದೂರು ರಘು, ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್, ಸಿ.ಎಂ.ಮುನಿರಾಜು, ಗೋಪಾಲಕೃಷ್ಣ, ಎಸ್.ಡಿ.ಎಂ.ಸಿ ಅಧ್ಯಕ್ಷ ಮಂಜುನಾಥ್, ವೆಂಕಟರೆಡ್ಡಿ, ಜಯರಾಮರೆಡ್ಡಿ, ವಿಶ್ವನಾಥ್, ಎಸ್.ಎಂ.ರಮೇಶ್, ಶಿಕ್ಷಕರಾದ ನಾಗಭೂಷಣ್, ಎಂ.ಎ.ರಾಮಕೃಷ್ಣ, ಗಂಗಶಿವಪ್ಪ, ಬಿ.ಆರ್.ಸಿ ತ್ಯಾಗರಾಜ್, ಮಂಜುನಾಥ್, ಚಂದ್ರಕಲಾ, ವೇಣುಮಾಧವಿ, ಪಂಕಜ, ಲಕ್ಷ್ಮೀದೇವಿ ಹಾಜರಿದ್ದರು.