Chikkaballapur : ಚಿಕ್ಕಬಳ್ಳಾಪುರ ನಗರದ ಉಪವಿಭಾಗಾಧಿಕಾರಿ ಕಚೇರಿ ಎದುರು ಶುಕ್ರವಾರ ಜೀತ ವಿಮುಕ್ತ ಕರ್ನಾಟಕ (ಜೀವಿಕ) (Serf-free Karnataka) ಸದಸ್ಯರು ಶಿಡ್ಲಘಟ್ಟ ತಾಲ್ಲೂಕಿನ ರೇಷ್ಮೆ ಕಾರ್ಖಾನೆಯಲ್ಲಿ ಜೀತದಾಳಾಗಿದ್ದ (Serfdom) ತಸ್ಲೀಮಾ ಮತ್ತು ಇವರ ಮಕ್ಕಳಿಗೆ ಬಿಡುಗಡೆ (Serf Release) ಪ್ರಮಾಣ ಪತ್ರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ತಸ್ಲೀಮಾ ಮತ್ತು ಅವರ ಮೂವರು ಮಕ್ಕಳನ್ನು ಜೀತವಿಮುಕ್ತಗೊಳಿಸಲಾಗಿದ್ದರೂ ಉಪವಿಭಾಗಾಧಿಕಾರಿ ಅವರು ಬಿಡುಗಡೆ ಪ್ರಮಾಣ ಪತ್ರ ನೀಡಲು ವಿಳಂಬ ಮಾಡುತ್ತಿದ್ದಾರೆ. ಇವರಷ್ಟೇ ಅಲ್ಲದೇ ಜೀತ ವಿಮುಕ್ತಿಗಾಗಿ ಅರ್ಜಿ ಸಲ್ಲಿಸಿರುವ ಎಲ್ಲ ಜೀತದಾಳುಗಳಿಗೆ ಕೂಡಲೇ ಬಿಡುಗಡೆ ಪತ್ರ ನೀಡಿ ಬಿಡುಗಡೆಯಾಗಿರುವ ಜೀತದಾಳುಗಳಿಗೆ ಎರಡು ಎಕರೆ ಜಮೀನು, ಮನೆ, ನಿವೇಶನ ನೀಡಬೇಕು ಎಂದು ಪ್ರತಿಭಟನಕಾರರು ತಿಳಿಸಿದರು.
ಜೀವಿಕ ರಾಜ್ಯ ಸಂಚಾಲಕಿ ರತ್ನಮ್ಮ, ಜಿಲ್ಲಾ ಸಂಚಾಲಕ ರವೀಂದ್ರನಾಥ್, ಗಂಗಹನುಮಯ್ಯ, ಚಂದ್ರಪ್ಪ, ಕೃಷ್ಣಪ್ಪ, ಹರೀಶ್, ಮುನಿಸ್ವಾಮಿ, ಪಿ.ಕೆ.ಗಂಗಾಧರಪ್ಪ, ಶಿವಗಂಗಪ್ಪ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.