Sidlaghatta : ವಚನ ಸಾಹಿತ್ಯದ ಮೂಲಕ ಸಾಮಾಜಿಕ ಮೌಢ್ಯತೆಗಳನ್ನು ಮುರಿದುಹಾಕಿ, ಜನರಿಗೆ ನವಜೀವನದ ದಾರಿ ತೋರಿಸಿದ ನಿಜಶರಣ ಅಂಬಿಗರ ಚೌಡಯ್ಯನವರ ಸಾಧನೆ ಅಮೂಲ್ಯ ಮತ್ತು ಆದರ್ಶಪ್ರಾಯವಾಗಿದೆ ಎಂದು ತಹಶೀಲ್ದಾರ್ ಬಿ.ಎನ್. ಸ್ವಾಮಿ ಹೇಳಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ತಾಲ್ಲೂಕು ಆಡಳಿತದ ವತಿಯಿಂದ ಆಯೋಜಿಸಲಾದ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
“ಹನ್ನೆರಡನೇ ಶತಮಾನದಲ್ಲಿ 300 ಕ್ಕೂ ಹೆಚ್ಚು ವಚನಗಳನ್ನು ರಚಿಸಿದ ಅಂಬಿಗರ ಚೌಡಯ್ಯನವರು, ತಮ್ಮ ವಚನಗಳ ಮೂಲಕ ಸಾಮಾಜಿಕ ಪರಿವರ್ತನೆಗೆ ಶ್ರಮಿಸಿದ ಮಹಾನ್ ಶರಣರಾಗಿದ್ದರು. ನೇರ ನಡೆ, ನುಡಿಗೆ ಹೆಸರಾಗಿದ್ದ ಚೌಡಯ್ಯನವರು ‘ನಿಜ ಶರಣ’ ಎಂಬ ಖ್ಯಾತಿ ಪಡೆದಿದ್ದರು. ಶರಣರ ತತ್ವ ಮತ್ತು ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯುವಾಗಲೇ ಈ ಜಯಂತ್ಯುತ್ಸವ ಸಾರ್ಥಕವಾಗುತ್ತದೆ” ಎಂದು ಅವರು ಹೇಳಿದರು.
ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಮೇಲೂರು ಮಂಜುನಾಥ್ ಮಾತನಾಡಿ, “ನಿಜಶರಣ ಅಂಬಿಗರ ಚೌಡಯ್ಯನವರ ಆದರ್ಶ ಮತ್ತು ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ, ಸುಸಂಸ್ಕೃತ ಹಾಗೂ ಮೌಲ್ಯಯುತ ಸಮಾಜದ ನಿರ್ಮಾಣ ಸಾಧ್ಯ. ಅವರ ವಚನಗಳು ಬಡವರ ಮತ್ತು ಶೋಷಿತರಿಗಾಗಿ ಹೊಸ ದಿಕ್ಕು ತೋರಿಸಿತು” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರತಿಭಾ ಪುರಸ್ಕಾರ ನೀಡಲಾಯಿತು.
ತಾಲೂಕು ಬೆಸ್ತರ ಸಂಘದ ಅಧ್ಯಕ್ಷ ಡಿ.ಎನ್. ಶಿವಣ್ಣ, ಸಮುದಾಯದ ಮುಖಂಡರಾದ ಗೋಪಾಲ್, ಲಕ್ಷ್ಮಿನಾರಾಯಣ, ಡಿ.ಎಚ್. ನಾಗರಾಜ್ ಮತ್ತು ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.