Bodaguru, Sidlaghatta :ವಿದ್ಯಾರ್ಥಿಗಳಿಗೆ ದೇಶಪ್ರೇಮ ಮತ್ತು ಸಂಸ್ಕಾರ ಬೆಳೆಸಲು ಎನ್.ಎಸ್.ಎಸ್. ಶಿಬಿರ ಮಹತ್ವದ ಪಾತ್ರ ವಹಿಸುತ್ತದೆ. ಇದು ಜೀವನದಲ್ಲಿ ಗೌರವ ಹಾಗೂ ಸ್ವಾವಲಂಬನೆಯ ಜೀವನ ಪಾಠ ಕಲಿಸುತ್ತದೆ ಎಂದು ಸಾವಯವ ಕೃಷಿಕರು ಹಾಗೂ ಪ್ರಗತಿಪರ ರೈತರಾದ ಬೋದಗೂರು ವೆಂಕಟಸ್ವಾಮಿರೆಡ್ಡಿ ಅಭಿಪ್ರಾಯಪಟ್ಟರು.
ದೇವನಹಳ್ಳಿ ತಾಲ್ಲೂಕಿನ ಕುಂದಾಣ ಬಳಿಯ ಕೇಂಬ್ರಿಡ್ಜ್ ತಾಂತ್ರಿಕ ಮಹಾವಿದ್ಯಾಲಯದ ಎನ್.ಎಸ್.ಎಸ್. ವಿದ್ಯಾರ್ಥಿಗಳಿಂದ ಬೋದಗೂರು ಗ್ರಾಮದಲ್ಲಿ ಆಯೋಜಿಸಿದ್ದ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
“ವಿದ್ಯಾರ್ಥಿ ಜೀವನದಲ್ಲಿಯೇ ಧೈರ್ಯ, ಗುರಿ, ಶಿಸ್ತು, ಬದ್ಧತೆ ಹಾಗೂ ಸೇವಾ ಮನೋಭಾವ ಬೆಳೆಸಿಕೊಂಡರೆ ಮಾತ್ರ ಜೀವನದಲ್ಲಿ ಮಹತ್ತರ ಸಾಧನೆ ಸಾಧ್ಯ,” ಎಂದು ಅವರು ಸಲಹೆ ನೀಡಿದರು. ತಂದೆ, ತಾಯಿ, ಗುರು ಹಾಗೂ ಹಿರಿಯರಿಗೆ ಗೌರವ ನೀಡುವ ಗುಣಗಳನ್ನು ಬಾಲ್ಯದಲ್ಲಿಯೇ ಬೆಳಸಿಕೊಂಡು, ಇತರರಿಗೆ ಮಾದರಿಯಾಗಿ ಬದುಕಬೇಕು ಎಂದು ಸೂಚಿಸಿದರು.
ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಮುನಿರಾಜು ಮಾತನಾಡಿ, “ಸಮಾಜಕ್ಕೆ ಭಾರವಾಗಿ ಬದುಕಿದರೆ ಜೀವನಕ್ಕೆ ಅರ್ಥವಿಲ್ಲ. ಸಮಾಜವು ನಿಮ್ಮನ್ನು ಗುರುತಿಸುವಂತೆ ಸೇವಾ ಮನೋಭಾವದೊಂದಿಗೆ ಕಾರ್ಯನಿರ್ವಹಿಸಬೇಕು,” ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕವಿ ದೇವರಮಳ್ಳೂರು ಚೆನ್ನಕೃಷ್ಣ ಮಾತನಾಡಿ, “ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸೇವಾ ಬದ್ಧತೆಯನ್ನು ಮೂಡಿಸಲು ಹಾಗೂ ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಎನ್.ಎಸ್.ಎಸ್. ಶಿಬಿರ ಪೂರಕವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಇದರ ಅನುಭವ ಪಡೆಯಬೇಕು,” ಎಂದು ಹೇಳಿದರು.
ಕೇಂಬ್ರಿಡ್ಜ್ ಕಾಲೇಜಿನ ನಿರ್ದೇಶಕ ಡಾ.ಕೆ.ಉದಯ್ ಕುಮಾರ್ ಅಧ್ಯಕ್ಷತೆ ವಹಿಸಿ, “ಈ ಕಾಲದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಉತ್ತಮ ಅವಕಾಶಗಳು ಲಭ್ಯವಿವೆ. ವಿದ್ಯಾರ್ಥಿ ಜೀವನದಲ್ಲಿಯೇ ನಿರಂತರವಾಗಿ ಪ್ರಯತ್ನ ಮಾಡಿ, ಸಮಯಕ್ಕೆ ಮಹತ್ವ ನೀಡಿ, ಪ್ರಾಮಾಣಿಕತೆ ಬೆಳೆಸಿ, ಅಧ್ಯಯನಶೀಲರಾಗಿ ದೇಶವನ್ನು ಅಭಿವೃದ್ಧಿಪಡಿಸಬೇಕು,” ಎಂದು ಪ್ರೇರಣಾದಾಯಕ ಮಾತುಗಳನ್ನಾಡಿದರು.
ಎನ್.ಎಸ್.ಎಸ್. ಶಿಬಿರದ ಅವಧಿಯಲ್ಲಿ ಬೋದಗೂರು ಹಾಗೂ ಆನೂರು ಗ್ರಾಮಗಳಲ್ಲಿ ಪ್ಲಾಸ್ಟಿಕ್ ಮುಕ್ತ ಗ್ರಾಮ ಅಭಿಯಾನ, ಆರೋಗ್ಯ ಶಿಬಿರ, ಸ್ವಚ್ಛತೆ ಜಾಗೃತಿ ಕಾರ್ಯಕ್ರಮ, ರೈತರೊಂದಿಗೆ ಸಂವಾದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಜಾನಪದ ಕಲಾವಿದೆ ದ್ಯಾವಮ್ಮ ಹಾಗೂ ಇತರ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ವಿಶ್ವಾಸ್, ಎಂ.ಪಿ.ಸಿ.ಎಸ್. ಕಾರ್ಯದರ್ಶಿ ಚಂದ್ರೇಗೌಡ, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಎಂ.ಜೆ. ಶಂಕರ್, ವಿಟಿಯು ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ. ಸುದರ್ಶನರೆಡ್ಡಿ, ಮೀರಾ, ಬಿಂದು, ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರಾದ ವಿಶ್ವನಾಥ್, ಗ್ರಾಮದ ಪ್ರಮುಖರಾದ ದೊಡ್ಡಮಾರಪ್ಪ, ರಾಮಮೂರ್ತಿ, ನಾಗೇಶ್, ರಾಕೇಶ್, ಸುರೇಶ್ ಮುಂತಾದವರು ಭಾಗವಹಿಸಿದ್ದರು.