Sidlaghatta : ಈ ಲೋಕಸಭೆ ಚುನಾವಣೆಯಲ್ಲಿ ಕೋಲಾರ ಸಂಸತ್ ಕ್ಷೇತ್ರದ Congress ಅಭ್ಯರ್ಥಿ ಗೌತಮ್ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಲು ಸನ್ನದ್ಧರಾಗುವಂತೆ ಮಾಜಿ ಸಚಿವ, ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿಯ ರಾಜ್ಯ ಉಪಾಧ್ಯಕ್ಷ ವಿ.ಮುನಿಯಪ್ಪ (V Muniyappa) ಅವರು ತಮ್ಮ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರಿಗೆ ತಿಳಿಸಿದರು.
ತಾಲ್ಲೂಕಿನ ಹಂಡಿಗನಾಳದ ತಮ್ಮ ನಿವಾಸದಲ್ಲಿ ಬುಧವಾರ ಕರೆದ ತಮ್ಮ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕೋಲಾರ ಸಂಸತ್ ಕ್ಷೇತ್ರವು ಕಾಂಗ್ರೆಸ್‌ನ ಭದ್ರಕೋಟೆ ಆಗಿದೆ. ಆಕಸ್ಮಿಕವಾಗಿ ಕಳೆದ ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲಾಯಿತು.ಈ ಭಾರಿ ನಾವು ಸ್ವಲ್ಪವೇ ಮೈ ಮರೆತರೂ ಕಷ್ಟ. ಹಾಗಾಗಿ ಎಲ್ಲರೂ ಎಚ್ಚೆತ್ತು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು, ಕಾಂಗ್ರೆಸ್ ಪಕ್ಷದ ರೈತ, ಮಹಿಳೆ, ಯುವಕರ ಪರವಾದ ಯೋಜನೆಗಳನ್ನು ಮತದಾರರಿಗೆ ವಿವರಿಸಿ ಹೆಚ್ಚಿನ ಮತ ಹಾಕಿಸುವ ಕಾರ್ಯ ಮಾಡಬೇಕಿದೆ ಎಂದರು.
ವಿ.ಮುನಿಯಪ್ಪ ಅವರ ಪುತ್ರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ.ಎಂ.ಶಶಿಧರ್‌ಮುನಿಯಪ್ಪ ಮಾತನಾಡಿ, ನಮ್ಮ ತಂದೆಯವರ ಹಿರಿತನ, ಪಕ್ಷದ ಸಂಘಟನೆಯನ್ನು ಪರಿಗಣಿಸಿ ಕೆಪಿಸಿಸಿ ಉಪಾಧ್ಯಕ್ಷರಂತ ಮಹತ್ವದ ಸ್ಥಾನವನ್ನು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ನೀಡಿದ್ದಾರೆ ಎಂದರು.
ನಮ್ಮ ತಂದೆಯವರು ಆರೋಗ್ಯ ಸಮಸ್ಯೆಯಿಂದಾಗಿ ಕಳೆದ ಒಂದು ವರ್ಷದಿಂದ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದರು. ಈ ಮಧ್ಯೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಬಣಗಳ ರಾಜಕೀಯ ಸೃಷ್ಟಿಯಾಗಿದೆ. ಇದು ಪಕ್ಷದ ಸಂಘಟನೆ, ಚುನಾವಣೆ ಫಲಿತಾಂಶದ ಮೇಲೂ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.
ಇದೆಲ್ಲವನ್ನೂ ಗಮಿಸಿದ ಹೈ ಕಮಾಂಡ್ ನಮ್ಮ ತಂದೆಯವರಿಗೆ ಕೆಪಿಸಿಸಿ ಉಪಾಧ್ಯಕ್ಷದಂತ ಮಹತ್ವದ ಸ್ಥಾನ ನೀಡಿ ಶಿಡ್ಲಘಟ್ಟದಲ್ಲಿ ಬಣ ರಾಜಕೀಯಕ್ಕೆ ತೆರೆ ಎಳೆದು ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಹೋಗಲು ಸೂಚಿಸಿದ್ದಾರೆ.
ಅದರಂತೆ ರಾಜೀವ್ ಗೌಡ ಮತ್ತು ಪುಟ್ಟು ಆಂಜಿನಪ್ಪ ಅವರನ್ನು ಕರೆದು ಪ್ರತ್ಯೇಕವಾಗಿ ಅವರ ಅಭಿಪ್ರಾಯವನ್ನು ಸಂಗ್ರಹಿಸಿ ಅವರಲ್ಲಿನ ಭಿನ್ನ ಮತವನ್ನು ನಿವಾರಿಸಿ ಇಬ್ಬರನ್ನೂ ಕಾಂಗ್ರೆಸ್ ತೆಕ್ಕೆಯಲ್ಲಿ ಒಟ್ಟುಗೂಡಿಸಿಕೊಂಡು ಹೋಗುವಂತ ಪ್ರಯತ್ನ ನಡೆಸುತ್ತೇವೆ ಎಂದರು.
ಕೋಲಾರ ಸಂಸತ್ ಕ್ಷೇತ್ರದ ಅಭ್ಯರ್ಥಿ ಗೌತಮ್ ಅವರು ಶಿಡ್ಲಘಟ್ಟ ಕ್ಷೇತ್ರಕ್ಕೆ ಪ್ರಚಾರಕ್ಕೆಂದು ಬರುವ ಮುನ್ನವೇ ಇಬ್ಬರು ನಾಯಕರನ್ನೂ ಕರೆಸಿ ಮಾತನಾಡಿಸಿ ಬಿನ್ನಾಭಿಪ್ರಾಯಗಳನ್ನು ಶಮನ ಮಾಡಿ ಇಬ್ಬರೂ ನಾಯಕರು ಮತ್ತು ಅವರ ಬೆಂಬಲಿಗರನ್ನು ಒಟ್ಟುಗೂಡಿಸಿ ಪಕ್ಷದ ಪರ ಕೆಲಸ ಮಾಡುವಂತೆ ಮಾಡಲಾಗುವುದು ಎಂದು ವಿವರಿಸಿದರು.
ಕೋಚಿಮುಲ್ ನಿರ್ದೇಶಕ ಆರ್.ಶ್ರೀನಿವಾಸ್, ಬೆಳ್ಳೂಟಿ ಸಂತೋಷ್, ವಿ.ಸುಬ್ರಮಣಿ, ಮುತ್ತೂರು ಚಂದ್ರೇಗೌಡ, ಮೇಲೂರು ಮುರಳಿ, ಹೊಸಪೇಟೆ ಮುನಿಯಪ್ಪ ಹಾಜರಿದ್ದರು.