Sidlaghatta : ಶಿಡ್ಲಘಟ್ಟ ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಗುರುವಾರ ಕೋವಿಡ್ 19 ಬೃಹತ್ ಲಸಿಕೆ ಮೇಳದ ಪೂರ್ವಭಾವಿಯಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಜಾಥಾ ಕ್ಕೆ ಚಾಲನೆ ನೀಡಿ ತಹಶೀಲ್ದಾರ್ ಬಿ.ಎಸ್.ರಾಜೀವ್ ಮಾತನಾಡಿದರು.
ತಾಲ್ಲೂಕಿನಾದ್ಯಂತ ಈವರೆಗೂ ಶೇ 80 ರಷ್ಟು ಲಸಿಕೆ ನೀಡಲಾಗಿದ್ದು ತಾಲ್ಲೂಕಿನಾದ್ಯಂತ ಮೊದಲನೇ ಡೋಸ್ ಪಡೆದು ಎರಡನೇ ಡೋಸ್ ಲಸಿಕೆ ಪಡೆಯುವವರು ಸುಮಾರು 24 ಸಾವಿರ ಮಂದಿ ಇದ್ದು, ನಾಳೆ ನಡೆಯಲಿರುವ ಲಸಿಕಾ ಮೇಳಕ್ಕೆ ಬಂದು ಎಲ್ಲರೂ ಲಸಿಕೆ ಪಡೆಯುವ ಮೂಲಕ ತಾಲ್ಲೂಕನ್ನು ಕೊರೊನಾ ಮುಕ್ತವನ್ನಾಗಿಸಬೇಕು ಎಂದು ಅವರು ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ಮೂರ್ತಿ ಮಾತನಾಡಿ, ಈವರೆಗೂ ಕೋವಿಡ್ ಲಸಿಕೆ ಪಡೆಯದೇ ಇರುವ ಪ್ರತಿಯೊಬ್ಬರಿಗೂ ನಾಳಿನ ಲಸಿಕೆ ಮೇಳದಲ್ಲಿ ಲಸಿಕೆ ಹಾಕಲು ಬೇಕಾದ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಮೊದಲನೇ ಡೋಸ್ ಪಡೆದು ಎರಡನೇ ಡೋಸ್ ಪಡೆಯಲು 84 ದಿನಗಳು ಕಳೆದಿದ್ದರೂ ಹಾಕಿಸಿಕೊಳ್ಳದವರನ್ನು ಗುರುತಿಸಿ ಲಸಿಕೆ ಹಾಕಲಾಗುವುದು.
ನಾಳೆ ನಡೆಯಲಿರುವ ಲಸಿಕಾ ಮೇಳದಲ್ಲಿ ತಾಲೂಕಿನಾದ್ಯಂತ 17 ಸಾವಿರ ಜನರಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು ಗುರಿ ತಲುಪಲು ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ಪ್ರತಿಯೊಬ್ಬರೂ ತಾಲ್ಲೂಕು ಆಡಳಿತಕ್ಕೆ ಸಹಕಾರ ನೀಡಬೇಕು. ತಮ್ಮ ಕುಟುಂಬದವರು, ಅಕ್ಕಪಕ್ಕದವರು ಯಾರೇ ಲಸಿಕೆ ಹಾಕಿಸಿರದಿದ್ದರೂ ಕರೆದುಕೊಂಡು ಬಂದು ಹಾಕಿಸಿ. ಇದು ಎಲ್ಲರ ಸಾಮಾಜಿಕ ಜವಾಬ್ದಾರಿ. ಕೋವಿಡ್ ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಬದಲಿಗೆ ಕೊರೊನಾ ಹಿಮ್ಮೆಟ್ಟಿಸಲು ಅದು ಅಸ್ತ್ರವಾಗಿದೆ. ಆದ್ದರಿಂದ ಜನತೆ ಕಡ್ಡಾಯವಾಗಿ ಲಸಿಕೆ ಪಡೆಯಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಡಾ.ಗುರು, ಡಾ.ವಿಜಯ್, ಪ್ರಭಾರಿ ಶಿಶು ಅಭಿವೃದ್ದಿ ಅಧಿಕಾರಿ ಮಹೇಶ್, ನಗರಸಭೆಯ ಆರೋಗ್ಯ ನಿರೀಕ್ಷಕಿ ಶೋಭಾ, ಆರೋಗ್ಯ ಸಿಬ್ಬಂದಿ ಲೋಕೇಶ್, ದೇವರಾಜ್, ನರಸಿಂಹಮೂರ್ತಿ ಹಾಜರಿದ್ದರು.