Sidlaghatta : ಕೋಲಾರ ಮತ್ತು ಚಿಕ್ಕಬಳ್ಳಾಪುರ ಭಾಗದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸುವುದು ಮತ್ತು ಶಾಶ್ವತ ನೀರಾವರಿ ಯೋಜನೆ ಜಾರಿ ಮಾಡಿ ರೈತರ ಬದುಕನ್ನು ಹಸನು ಮಾಡುವುದು ನನ್ನ ಆಧ್ಯತೆ ಆಗಿದೆ ಎಂದು ಕೋಲಾರದ ನೂತನ ಸಂಸದ ಮಲ್ಲೇಶ್ ಬಾಬು ತಿಳಿಸಿದರು.
ಕೋಲಾರ ಸಂಸತ್ ಕ್ಷೇತ್ರದ ಸಂಸದರಾಗಿ ಚುನಾಯಿತರಾದ ನಂತರ ಮೊದಲ ಬಾರಿಗೆ ಶಿಡ್ಲಘಟ್ಟ ಕ್ಷೇತ್ರದ ಶಾಸಕ ಬಿ.ಎನ್.ರವಿಕುಮಾರ್ ಅವರ ಮೇಲೂರಿನ ನಿವಾಸಕ್ಕೆ ಭೇಟಿ ನೀಡಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರವು ಬಯಲು ಸೀಮೆ ಭಾಗದಲ್ಲಿದ್ದು ಇಲ್ಲಿ ಕೃಷಿ ಮತ್ತು ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದೆ. ಅದಕ್ಕೂ ಮೀರಿ ಇಲ್ಲಿ ನಿರುದ್ಯೋಗ ಸಮಸ್ಯೆಯೂ ಕಾಡುತ್ತಿರುವ ವಿಷಯದ ಗಂಭೀರತೆಯ ಅರಿವು ನನಗಿದೆ. ಆ ನಿಟ್ಟಿನಲ್ಲಿ ಸಮಸ್ಯೆಯ ಅಧ್ಯಯನ ನಡೆಸಲು ನನಗೆ ಒಂದಷ್ಟು ಕಾಲಾವಕಾಶ ಬೇಕಿದೆ ಎಂದರು.
ನಾನು ಇನ್ನೂ ಅಧಿಕೃತವಾಗಿ ಸಂಸದನಾಗಿ ಪ್ರಮಾಣ ವಚನ ಸ್ವೀಕರಿಸಿಲ್ಲ. ನನ್ನ ಅಧಿಕಾರ ವ್ಯಾಪ್ತಿಯನ್ನು ಅಧ್ಯಯನ ಮಾಡಬೇಕಿದೆ. ಸ್ಥಳೀಯ ಸಮಸ್ಯೆಗಳ ಬಗ್ಗೆ ಇನ್ನಷ್ಟು ಆಳವಾದ ಜ್ಞಾನವೂ ಬೇಕಿದೆ. ನಂತರ ಪಕ್ಷದ ಹಿರಿಯರು, ಅಧಿಕಾರಿಗಳ ಸಹಕಾರದಿಂದ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿ, ಕೋಲಾರ ಸಂಸತ್ ಕ್ಷೇತ್ರದಲ್ಲಿ ಸ್ವಾತಂತ್ರ್ಯ ನಂತರ ಇದುವರೆಗೂ ಜೆಡಿಎಸ್ ಅಭ್ಯರ್ಥಿ ಗೆದ್ದಿರುವುದು ಎರಡು ಬಾರಿ ಮಾತ್ರ. ಮಲ್ಲೇಶ್ ಬಾಬು ಇದೀಗ ನಿಮ್ಮೆಲ್ಲರ ಆಶೀರ್ವಾದದಿಂದ ಗೆದ್ದು ಸಂಸತ್ ಪ್ರವೇಶಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಜೆಡಿಎಸ್ ನ ವರಿಷ್ಠ ಮಾಜಿ ಪ್ರಧಾನಿ ದೇವೇಗೌಡರು, ಪ್ರಧಾನಿ ಮೋದಿ ಅವರ ಆಶೀರ್ವಾದ ಮಲ್ಲೇಶ್‌ಬಾಬು ಮೇಲಿದ್ದು ಕುಮಾರಸ್ವಾಮಿ ಅವರ ಬೆಂಬಲವೂ ಇದೆ. ಇವರೆಲ್ಲರ ಸಹಕಾರದಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಭಾಗದ ಅಭಿವೃದ್ದಿಗೆ ಇವರು ಶ್ರಮಿಸುತ್ತಾರೆ ಎಂಬ ನಂಬಿಕೆ ಇದೆ ಎಂದರು.
ಈ ಭಾಗದಲ್ಲಿ ಶಾಶ್ವತ ನೀರಾವರಿ ಯೋಜನೆಯ ಸಮಸ್ಯೆ ಮುಖ್ಯವಾಗಿದೆ. ರೈತರು ನಾನಾ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಈ ಭಾಗದ ರೈತರ ಕಷ್ಟದ ಇಂಚಿಂಚು ಮಾಹಿತಿಯೂ ದೇವೇಗೌಡರಿಗೆ ಇದೆ. ಹಾಗಾಗಿ ದೇವೇಗೌಡರು ಪ್ರಧಾನಿ ಮೋದಿ ಅವರ ಮೇಲೆ ಒತ್ತಡ ಹಾಕಿ ಈ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆ ಜಾರಿ ಮಾಡಬೇಕಿದೆ ಎಂದು ಮನವಿ ಮಾಡಿದರು.
ಈ ನಿಟ್ಟಿನಲ್ಲಿ ಮಲ್ಲೇಶ್ ಬಾಬು ಅವರು ನಿರಂತರವಾಗಿ ಶ್ರಮಿಸಬೇಕು, ನಿಮಗೆ ಎಲ್ಲ ರೀತಿಯ ನೆರವು ಸಹಕಾರ ನಾವು ನೀಡಲಿದ್ದೇವೆ ಎಂದು ಭರವಸೆ ನೀಡಿದರು.
ಸಂಸದರಾಗಿ ಚುನಾಯಿತರಾದ ನಂತರ ಮೊದಲ ಬಾರಿಗೆ ಶಿಡ್ಲಘಟ್ಟಕ್ಕೆ ಆಗಮಿಸಿದ ಮಲ್ಲೇಶ್ ಬಾಬು ಅವರನ್ನು ಶಾಸಕ ರವಿಕುಮಾರ್ ಸೇರಿದಂತೆ ಕ್ಷೇತ್ರದ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಪಕ್ಷದ ಮುಖಂಡರು, ಕಾರ್ಯಕರ್ತರು ಹೂವಿನ ಹಾರ ಹಾಕಿ ಶಾಲು ಹೊದಿಸಿ ಸನ್ಮಾನಿಸಿ ಸಿಹಿ ತಿನ್ನಿಸಿ ಸಂಭ್ರಮಿಸಿದರು.
ಮುಖಂಡರಾದ ಬಂಕ್ ಮುನಿಯಪ್ಪ, ತಾದೂರು ರಘು, ರಾಮಯ್ಯ, ನಂಜಪ್ಪ, ಅಪ್ಪೇಗೌಡನಹಳ್ಳಿ ಲಕ್ಷ್ಮೀನಾರಾಯಣ್, ಡಿ.ಬಿ.ವೆಂಕಟೇಶ್, ಬಿ.ವಿ.ನಾರಾಯಣಸ್ವಾಮಿ, ಸೀಕಲ್ ಆನಂದಗೌಡ, ವೆಂಕಟೇಶ್ವರರಾವ್, ಕೃಷ್ಣಸಮಂತ್, ಸಂದೀಪ್, ಡಾ.ಡಿ.ಟಿ.ಸತ್ಯನಾರಾಯಣರಾವ್ ಇನ್ನಿತರೆ ಮುಖಂಡರು ಹಾಜರಿದ್ದರು.