Patrahalli, Sidlaghatta : ನಗರಕ್ಕೆ ಅತ್ಯಂತ ಸಮೀಪದಲ್ಲಿರುವ ಬೇಚರಾಕ್ ಗ್ರಾಮ ಪಟ್ರಹಳ್ಳಿಯ ಬಯಲಾಂಜನೇಯಸ್ವಾಮಿ ದೇವಾಲಯದ ಮುಂದಿನ ಪುರಾತನ ಕುಂಟೆ ಇದೀಗ ತ್ಯಾಜ್ಯ ಸುರಿಯುವ ತಾಣವಾಗಿ ಬದಲಾಗಿದೆ. ಜನವಸತಿ ಇಲ್ಲದೆ, ಸುತ್ತ ಅರಣ್ಯ ಪ್ರದೇಶ ಆಗಿರುವುದರಿಂದ ರಾತ್ರಿ ಹೊತ್ತಿನಲ್ಲಿ ಟ್ರಾಕ್ಟರ್ ಗಳಲ್ಲಿ ತ್ಯಾಜ್ಯ ಮತ್ತು ಕೆಡವಿರುವ ಕಟ್ಟಡಗಳ ಕಲ್ಲು, ಮಣ್ಣು ಇತ್ಯಾದಿಗಳನ್ನೆಲ್ಲಾ ತುಂಬಿ ತಂದು ಇಲ್ಲಿ ಸುರಿಯಲಾಗುತ್ತಿದೆ.
ಈ ಭಾಗದಲ್ಲಿನ ಕೆಲವರು ಇದನ್ನು ಗಮನಿಸಿ, ರಾತ್ರಿ ಹೊತ್ತಿನಲ್ಲಿ ಕಾದಿದ್ದು, ಎರಡು ಟ್ರಾಕ್ಟರ್ ಗಳನ್ನು ಹಿಡಿದು ನಿಲ್ಲಿಸಿದ್ದಾರೆ ಮತ್ತು ಪೊಲೀಸರಿಗೆ ಒಪ್ಪಿಸಿದ್ದಾರೆ. ಅತ್ಯಂತ ಪುರಾತನ ಕುಂಟೆಯನ್ನು ಜೀರ್ಣೋದ್ದಾರ ಮಾಡದಿದ್ದರೂ ಚಿಂತೆಯಿಲ್ಲ, ತ್ಯಾಜ್ಯವನ್ನು ಸುರಿದು ಹಾಳು ಮಾಡಬೇಡಿ ಎನ್ನುತ್ತಿದ್ದಾರೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ಎಚ್ಚೆತ್ತುಕೊಂಡು ಸ್ಥಳಪರಿಶೀಲನೆ ನಡೆಸಬೇಕು. ಕುಂಟೆಯನ್ನು ಉಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಹಿಂದೆ ಶಿಡ್ಲಘಟ್ಟದ ಹೊರವಲಯದಲ್ಲಿ ರೇಪಲ್ಲಿ ಮತ್ತು ಪಟ್ರೇನಹಳ್ಳಿ(ಪಟ್ರಹಳ್ಳಿ) ಎಂಬ ಅವಳಿ ಹಳ್ಳಿಗಳಿದ್ದವು. ಈಗ ಅವು ಕಂದಾಯ ಇಲಾಖೆಯ ಪ್ರಕಾರ ಬೇಚರಾಕ್ (ಜನವಸತಿ ಇಲ್ಲದ) ಗ್ರಾಮಗಳು. ನಗರದಿಂದ ದಿಬ್ಬೂರಹಳ್ಳಿ ರಸ್ತೆಯಲ್ಲಿ ಹನುಮಂತಪುರ ಗೇಟ್ ಬಳಿ ಬಲಕ್ಕೆ ಕಾಲುದಾರಿಯಲ್ಲಿ ಹೋದರೆ ಅಲ್ಲಿ ಕೃಷ್ಣಸ್ವಾಮಿಯ ಗುಡಿಯಿದೆ. ಅದು ರೇಪಲ್ಲಿಗೆ ಸೇರಿದ ದೇವಸ್ಥಾನ. ಅಲ್ಲಿಂದ ಸುಮಾರು ಅರ್ಧ ಕಿ.ಮೀ ದೂರ ಕ್ರಮಿಸಿದರೆ ಪಟ್ರೇನಹಳ್ಳಿಯ ಬಯಲಾಂಜನೇಯಸ್ವಾಮಿ ದೇವಸ್ಥಾನ ಸಿಗುತ್ತದೆ. ಈ ದೇವಸ್ಥಾನಕ್ಕೆ ಭಕ್ತರು ಹೆಚ್ಚಾಗಿ ಬರುತ್ತಾರೆ. ವರ್ಷಕ್ಕೊಮ್ಮೆ ಉಟ್ಲು ಪರಿಷೆ ಕೂಡ ನಡೆಯುತ್ತದೆ. ಈ ದೇವಸ್ಥಾನದ ಬಳಿ ಒಂದು ಕುಂಟೆ ಮತ್ತು ಹಳೆಯದಾದ ಮೂರು ಆಲದ ಮರಗಳಿವೆ. ಜನರ ಆಡು ಮಾತಿನಲ್ಲಿ ಪಟ್ರೇನಹಳ್ಳಿಯು ಪಟ್ರಹಳ್ಳಿ ಎಂದಾಗಿದೆ. ಈ ಭಾಗದ ಅರಣ್ಯ ಪ್ರದೇಶವನ್ನು ಸಹ ಪಟ್ರಹಳ್ಳಿ ಅರಣ್ಯವೆಂದೇ ಇಲಾಖೆಯ ದಾಖಲೆಗಳಲ್ಲಿದೆ. ಅರಣ್ಯ ಇಲಾಖೆಯಿಂದ ರೂಪಿಸಲಾಗಿರುವ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನದ ನಾಮಫಲಕದಲ್ಲೂ ಪಟ್ರಹಳ್ಳಿ ಎಂದೇ ಇದೆ.
ಎಲ್ಲೆಡೆ ನೀರಿನ ಸೆಲೆಗಳನ್ನು ಉಳಿಸಬೇಕು ಎಂಬ ಮಾತು ಕೇಳಿ ಬರುವಾಗ ಇರುವ ಪುರಾತನ ಕುಂಟೆಗಳನ್ನು ನಾಶ ಮಾಡುವ ಕಾರ್ಯಕ್ಕೆ ಮುಂದಾಗಿರುವವರನ್ನು ಶಿಕ್ಷಿಸಬೇಕು ಎಂದು ಈ ಭಾಗದ ಜನರು ಒತ್ತಾಯಿಸಿದ್ದಾರೆ.