Sidlaghatta : ಶಿಡ್ಲಘಟ್ಟ ನಗರ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಶುಕ್ರವಾರ ರೇಷ್ಮೆ ಗೂಡಿನ ಬೆಲೆ ಏರಿಕೆ ಕಂಡು, ಈ ವರ್ಷದ ಗರಿಷ್ಠ ದರ ದಾಖಲಾಗಿದೆ. ದೇವನಹಳ್ಳಿ ತಾಲ್ಲೂಕು ಹೊಸೂರು ಗ್ರಾಮದ ರೇಷ್ಮೆ ಬೆಳೆಗಾರ ಕೆ.ಕೃಷ್ಣಮೂರ್ತಿ ಬೆಳೆದ ದ್ವಿತಳಿ ರೇಷ್ಮೆ ಗೂಡು 800 ರೂಪಾಯಿಗಳಿಗೆ ಮಾರಾಟಗೊಂಡು ದಾಖಲೆ ನಿರ್ಮಿಸಿದೆ.
ಹರಾಜಿನಲ್ಲಿ ಈ ರೇಷ್ಮೆ ಗೂಡಿಗೆ ಹೆಚ್ಚಿನ ಮೊತ್ತ ನೀಡಿದ ರೀಲರ್ ಸಲೀಂ, ಗರಿಷ್ಠ ದರದಲ್ಲಿ ಖರೀದಿ ಮಾಡಿದ ವ್ಯಕ್ತಿಯಾಗಿ ಗುರುತಿಸಲ್ಪಟ್ಟಿದ್ದಾರೆ. ರೇಷ್ಮೆ ಬೆಳೆಗಾರ ಕೃಷ್ಣಮೂರ್ತಿ ಅವರ ಉತ್ತಮ ಉತ್ಪಾದನೆ ಹಾಗೂ ರೀಲರ್ ಸಲೀಂ ಅವರ ಬೆಂಬಲಕ್ಕಾಗಿ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯ ಉಪನಿರ್ದೇಶಕ ಎನ್.ಮಹದೇವಯ್ಯ ಮತ್ತು ಸಹಾಯಕ ನಿರ್ದೇಶಕ ಕೆ.ತಿಮ್ಮರಾಜು ಪ್ರಮಾಣಪತ್ರ ನೀಡುವ ಮೂಲಕ ಗೌರವಿಸಿದರು.
ಈ ಸಂದರ್ಭ ಮಾತನಾಡಿದ ಸಹಾಯಕ ನಿರ್ದೇಶಕ ಕೆ.ತಿಮ್ಮರಾಜು, “ದ್ವಿತಳಿ ರೇಷ್ಮೆ ಬೆಳೆಗಾರರನ್ನು ಉತ್ತೇಜಿಸಲು ಸರ್ಕಾರವು ಪ್ರತಿ ಕಿಲೋ ದ್ವಿತಳಿ ರೇಷ್ಮೆ ಗೂಡಿಗೆ 30 ರೂ. ಮತ್ತು ಪ್ರತಿ 100 ಮೊಟ್ಟೆ ದ್ವಿತಳಿ ಚಾಕಿಗೆ 1000 ರೂ. ಪ್ರೋತ್ಸಾಹಧನ ನೀಡುತ್ತಿದೆ. ದ್ವಿತಳಿ ರೇಷ್ಮೆ ಗೂಡಿಗೆ 800 ರೂ. ದರ ತಲುಪಿರುವುದು ರೈತರಲ್ಲಿ ಉತ್ಸಾಹವನ್ನು ಹೆಚ್ಚಿಸಿದೆ ಮತ್ತು ರೇಷ್ಮೆ ಬೆಳೆ ಬೆಳವಣಿಗೆಗೆ ಉತ್ತೇಜನ ನೀಡಿದೆ” ಎಂದು ಹೇಳಿದರು.