Sidlaghatta : ಶಿಡ್ಲಘಟ್ಟದ ರೇಷ್ಮೆ ಮಾದರಿ ಬಿತ್ತನೆ ಕೋಠಿಯ ಕಚೇರಿಯಲ್ಲಿ ಕೃಷಿ ವಿಶ್ವವಿದ್ಯಾನಿಲಯ ಜಿಕೆವಿಕೆ ಮತ್ತು ರೇಷ್ಮೆ ಇಲಾಖೆಯ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ “ರೇಷ್ಮೆ ಕೃಷಿಯಲ್ಲಿ ತ್ಯಾಜ್ಯಗಳ ನಿರ್ವಹಣೆ” ಕುರಿತಂತೆ ಒಂದು ದಿನದ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಾಗಾರದಲ್ಲಿ ಮಾತನಾಡಿದ ಸಹಾಯಕ ಪ್ರಾಧ್ಯಾಪಕಿ ಡಾ.ಕೆ.ಎಸ್.ವಿನೋದ, ಹಿಪ್ಪುನೇರಳೆ ಬೇಸಾಯ ಹಾಗೂ ಹುಳು ಸಾಕಾಣಿಕೆಯಲ್ಲಿ ದೊರೆಯುವ ಎಲೆ, ಕಡ್ಡಿ, ಹುಳುಗಳ ಹಿಕ್ಕೆ, ಮುಂತಾದ ತ್ಯಾಜ್ಯವನ್ನು ಸರಿಯಾದ ಕ್ರಮದಲ್ಲಿ ನಿರ್ವಹಿಸಿದಲ್ಲಿ ಉತ್ತಮ ಗುಣಮಟ್ಟದ ಸಾವಯವ ಗೊಬ್ಬರವನ್ನಾಗಿಸಬಹುದು. ವೇಸ್ಟ್ ಡೀಕಂಪೋಸರ್ ಬಳಸಿ ರೇಷ್ಮೆ ಕಡ್ಡಿಯಂತಹ ತ್ಯಾಜ್ಯಗಳನ್ನು ಕೇವಲ 70 ದಿನಗಳಲ್ಲಿ ಉತ್ತಮ ಗುಣಮಟ್ಟದ ಗೊಬ್ಬರವಾಗಿ ಪರಿವರ್ತಿಸಬಹುದು. ಉತ್ತಮವಾಗಿ ನಿರ್ವಹಿಸಿದ ತೋಟಗಳಲ್ಲಿ ನುಸಿಯಂತಹ ಪೀಡೆಗಳ ಹಾವಳಿ ಸಹ ಕಡಿಮೆಯಿದ್ದು ಗೂಡಿನ ಗುಣಮಟ್ಟ ಉತ್ತಮವಾಗಿರುವುದರಿಂದ ಅಧಿಕ ಲಾಭ ಪಡೆಯಬಹುದೆಂದು ತಿಳಿಸಿದರು.
ರೇಷ್ಮೆ ಇಲಾಖೆಯ ಮುಖ್ಯಸ್ಥ ಡಾ.ಮಂಜುನಾಥಗೌಡ ಮಾತನಾಡಿ, ರೇಷ್ಮೆ ಹುಳುಗಳ ರೋಗ ನಿರ್ವಹಣೆಯಲ್ಲಿ ಗುಣಮಟ್ಟದ ಆಹಾರದ ಜೊತೆಗೆ ಮೂರು ಹಂತದ ಪರಿಣಾಮಕಾರಿ ಸೋಂಕು ನಿವಾರಣೆ ಅತ್ಯಗತ್ಯ ಎಂದು ವಿವರಿಸಿದರು.
ರೇಷ್ಮೆ ಸಹಾಯಕ ನಿರ್ದೇಶಕ ತಿಮ್ಮರಾಜು ಮಾತನಾಡಿ, ರೈತರು ವೈಜ್ಞಾನಿಕ ರೀತಿಯಲ್ಲಿ ಬೆಳೆದ ಗೂಡಿಗೆ ಹೆಚ್ಚಿನ ದರ ಪಡೆಯಲು ಸಾಧ್ಯವಿದೆ ಎಂದರು.
ರೇಷ್ಮೆ ವಿಸ್ತರಣಾಧಿಕಾರಿ ಶಾಂತರಸ್, ಕೃಷಿ ವಿಜ್ಞಾನ ಕೇಂದ್ರದ ತಾಂತ್ರಿಕ ಅಧಿಕಾರಿ ಡಾ.ಅರುಣಾ ಮತ್ತು ರೇಷ್ಮೆ ಇಲಾಖೆಯ ಸಿಬ್ಬಂದಿ, ಸುಮಾರು 60 ಮಂದಿ ರೈತರು ಹಾಜರಿದ್ದರು.