Sidlaghatta : ಕೇಂದ್ರದಲ್ಲಿನ ಬಿಜೆಪಿ ಸರ್ಕಾರವು “ಒಂದು ದೇಶ ಒಂದು ಚುನಾವಣೆ” ವ್ಯವಸ್ಥೆಯನ್ನು ಜಾರಿ ಮಾಡಲು ಮುಂದಾಗಿದ್ದು ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಲಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್ ಆತಂಕ ವ್ಯಕ್ತಪಡಿಸಿದರು.
ನಗರದಲ್ಲಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಂದು ದೇಶ ಒಂದು ಚುನಾವಣೆ ವ್ಯವಸ್ಥೆಯು ಭಾರತದ ಮಣ್ಣಿಗೆ, ಇಲ್ಲಿನ ಜನರಿಗೆ ಒಗ್ಗುವುದಿಲ್ಲ. ಜತೆಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೂ ಮಾರಕವಾಗಲಿದ್ದು ಈ ನಿರ್ಧಾರದಿಂದ ಹಿಂದಕ್ಕೆ ಸರಿಯಬೇಕೆಂದು ಆಗ್ರಹಿಸಿದರು.
ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಮಾರಕವಾದ ಒಂದು ದೇಶ ಒಂದು ಚುನಾವಣೆಯ ನೀತಿ ವಿರುದ್ದ ಜನ ಜಾಗೃತಿ ಮೂಡಿಸಲು ಡಿ.27ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಅಂಬೇಡ್ಕರ್ ಅವರ 68ನೇ ವರ್ಷದ ಪರಿನಿರ್ವಾಣ ದಿನದ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಈ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿದ್ದು ಸುಪ್ರೀಂ ಕೋರ್ಟ್ ತೀರ್ಪಿನಂತೆ ನ್ಯಾ.ಸದಾಶಿವ ಆಯೋಗದ ವರದಿಯ ಒಳ ಮೀಸಲಾತಿ ಜಾರಿ ವಿಷಯ ಪ್ರಸ್ತಾಪಿಸಲಾಗುವುದು.
ಹಾಗೆಯೆ ಒಂದು ದೇಶ ಒಂದು ಚುನಾವಣೆಯ ಸಾಧಕ ಬಾಧಕಗಳ ಬಗ್ಗೆ ನಾನಾ ಕ್ಷೇತ್ರದ ತಜ್ಞರು, ಪ್ರಗತಿಪರರು, ಕದಸಂಸ ಮುಖಂಡರು ಭಾಗವಹಿಸಲಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಈ ವಿಚಾರ ಸಂಕಿರಣದಲ್ಲಿ ಭಾವಹಿಸಲು ಅವರು ಮನವಿ ಮಾಡಿದರು. ಕದಸಂಸ ಜಿಲ್ಲಾ ಸಂಘಟನಾ ಸಂಚಾಲಕ ದಢಂಘಟ್ಟ ತಿರುಮಲೇಶ್, ತಾಲ್ಲೂಕು ಸಂಚಾಲಕ ಸೊಣ್ಣಪ್ಪ ಹಾಜರಿದ್ದರು.