Sidlaghatta : ನಾಟಿ ಮಾಡಿ 12 ವರ್ಷಗಳಾದರೂ ಫಸಲು ಕೊಡದ ನೇರಳೆಗಿಡಗಳಿಂದಾಗಿ ಚಿಂತಿತನಾಗಿರುವರು ತಾಲ್ಲೂಕಿನ ವೀರಾಪುರದ ರೈತ ಬಿ.ಆರ್.ನಾಗರಾಜ್.
ನಿವೃತ್ತಿಯಾದ ನಂತರ ಜೀವನಕ್ಕೆ ಆಧಾರವಾಗಿರಲಿ ಎಂಬ ಉದ್ದೇಶದಿಂದ ತಮಗಿರುವ ಎರಡು ಎಕರೆ ಪ್ರದೇಶದಲ್ಲಿ ಸುಮಾರು 120 ನೇರಳೆ ಗಿಡಗಳನ್ನು ಅವರು ನಾಟಿ ಮಾಡಿದ್ದರು. ನಾಟಿ ಮಾಡಿ 12 ವರ್ಷಗಳಾಗಿರುವ ಗಿಡಗಳು, ಮರವಾಗಿ ಬೆಳೆದಿದೆಯಾದರೂ ಈವರೆಗೂ ಫಸಲು ಬಿಟ್ಟಿಲ್ಲ. ಪ್ರತಿನಿತ್ಯ ಜಮೀನಿನಲ್ಲಿರುವ ನೇರಳೆ ಮರಗಳನ್ನು ನೋಡಿ ಬೇಸತ್ತ ಅವರು ಈ ಮರಗಳನ್ನು ಉಳಿಸಬೇಕೋ ಅಥವಾ ಕಡಿದು ಹಾಕಬೇಕೋ ಎನ್ನುವ ಗೊಂದಲದಲ್ಲಿದ್ದಾರೆ.
ತಾಲೂಕಿನ ವೀರಾಪುರ ಗ್ರಾಮದ ಬಿ.ಆರ್.ನಾಗರಾಜ್ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಕಳೆದ 8 ವರ್ಷಗಳ ಹಿಂದೆ ನಿವೃತ್ತರಾಗಿದ್ದಾರೆ. ಅವರು ಸೇವೆಯಲ್ಲಿದ್ದ ಅವಧಿಯಲ್ಲಿ ತೋಟಗಾರಿಕೆ ಇಲಾಖೆಯಿಂದ ನೀಡಿದ ಸುಮಾರು 130 ನೇರಳೆ ಸಸಿಗಳನ್ನು ತಂದು ತಮಗಿರುವ 2 ಎಕರೆ ಪ್ರದೇಶದಲ್ಲಿ ನೆಟ್ಟಿದ್ದರು. ಇದೀಗ 12 ವರ್ಷಗಳಾದರೂ ಒಂದೇ ಒಂದು ಗಿಡ ಫಸಲು ಬಿಟ್ಟಿಲ್ಲ. ನಿವೃತ್ತರಾದ ನಂತರ ತಮ್ಮ ಜೀವನಕ್ಕೆ ಆಧಾರವಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರೈತ ಇದೀಗ ನೇರಳೆ ಮರಗಳನ್ನು ಉಳಿಸುವುದಾ ಕಡಿಯುವುದಾ ಎನ್ನುವ ಗೊಂದಲದಲ್ಲಿದ್ದಾರೆ.
ಈ ಬಗ್ಗೆ ಸಾಕಷ್ಟು ಬಾರಿ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಸಮಸ್ಯೆ ತೋಡಿಕೊಂಡಿದ್ದಾರದಾರೂ ಯಾವೊಬ್ಬ ಅಧಿಕಾರಿಯೂ ಇವರ ಸಮಸ್ಯೆಗೆ ಸ್ಪಂದಿಸಿಲ್ಲ.
ನಿವೃತ್ತ ಜೀವನವನ್ನು ನಿಶ್ಚಿಂತೆಯಿಂದ ಸಾಗಿಸುವ ಆಸೆಯಿಂದ ಗಿಡ ನೆಟ್ಟು ಹನ್ನೆರಡು ವರ್ಷ ಅದನ್ನು ಪೋಷಿಸಿದರೂ ಫಸಲು ನೀಡದ ಮರಗಳಿಂದ ರೈತ ಜೀವನ ನಡೆಸುವುದಾದರೂ ಹೇಗೆ? ಇನ್ನಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ರೈತನ ಕಷ್ಟಕ್ಕೆ ಸ್ಪಂದಿಸುತ್ತಾರಾ ಎಂಬ ನಿರೀಕ್ಷೆಯಲ್ಲಿ ಅವರಿದ್ದಾರೆ.