Sugaturu, Sidlaghatta : ಶಾಲಾ ದಿನಗಳಿಂದಲೇ ಮಕ್ಕಳಿಗೆ ಗಣಿತದ ವ್ಯಾವಹಾರಿಕ ಜ್ಞಾನವನ್ನು ಬೆಳೆಸಬೇಕಾದ ಅಗತ್ಯವಿದ್ದು, ಗಣಿತದ ಪ್ರಾಯೋಗಿಕ ಕೌಶಲವನ್ನು ವೃದ್ಧಿಸಿಕೊಳ್ಳಲು ಸೂಕ್ತ ಅವಕಾಶಗಳನ್ನು ಕಲ್ಪಿಸಬೇಕು ಎಂದು ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ತಿಳಿಸಿದರು.
ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಂಭಾಗದಲ್ಲಿ ಗಣಿತ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಮಕ್ಕಳಸಂತೆ, ಗಣಿತ ಕಲಿಕೋಪಕರಣಗಳ ಪ್ರದರ್ಶನ, ವಿಶ್ವಧ್ಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಣಿತದ ಅನ್ವಯಿಕ ಕ್ಷೇತ್ರಗಳಲ್ಲಿ ಮತ್ತಷ್ಟು ಪ್ರಗತಿಯ ಅಗತ್ಯವಿದ್ದು, ಗಣಿತವೇ ಇತರೆಲ್ಲಾ ಆವಿಷ್ಕಾರಗಳಿಗೂ ಮೂಲವಾಗಿದೆ. ಕಲಿಕೆಯ ಸನ್ನಿವೇಶದಲ್ಲಿ ಗಣಿತವನ್ನು ಮೂರ್ತ ಕಲ್ಪನೆಗಳನ್ನು ಮೂಡಿಸುವ ಮೂಲಕ ಆಸಕ್ತಿದಾಯಕವಾಗಿಸಬೇಕು ಎಂದರು.
ಭಾರತೀಯರ ಕೊಡುಗೆ ಅಪಾರ: ವಿಜ್ಞಾನ, ವೈದ್ಯಕೀಯ ಕ್ಷೇತ್ರ ಮತ್ತು ಗಣಿತ ಕ್ಷೇತ್ರಕ್ಕೆ ಭಾರತೀಯ ಋಷಿಮುನಿಗಳು, ವಿಜ್ಞಾನಿಗಳು ಮತ್ತು ಶ್ರೀನಿವಾಸ ರಾಮಾನುಜನ್ ಸೇರಿದಂತೆ ಭಾರತೀಯರ ಕೊಡುಗೆ ಅಪಾರವಾದುದು. ಗಣಿತ ಮತ್ತು ಸಂಶೋಧನೆಗಾಗಿ ಸಂಬಂಧಿತ ಕ್ಷೇತ್ರಗಳಲ್ಲಿ ಬೋಧನಾ-ಕಲಿಕಾ ಸಮಾಗ್ರಿಗಳ ಅಭಿವೃದ್ಧಿ, ಉತ್ಪಾದನೆ ಮತ್ತು ಪ್ರಸರಣದ ಬಗೆಗೆ ಸಾಕಷ್ಟು ಅರಿವು ಮೂಡಿಸಬೇಕಿದೆ. ಕಲಿಕೆಗೆ ಮಾತ್ರವಲ್ಲದೇ ಗಣಿತವು ಶೈಕ್ಷಣಿಕ ವಿಷಯವೂ, ಜೀವನಕೌಶಲವೂ ಆಗಿದ್ದು, ಬದುಕಿನ ನಿತ್ಯದ ಭಾಗವಾಗಿದೆ. ಗಣಿತದ ತಂತ್ರಗಳು ಮತ್ತು ಸೂತ್ರಗಳು ಆಸಕ್ತಿದಾಯಕವಾಗಿದ್ದು ಕಲಿತ ಗಣಿತದ ಜ್ಞಾನವನ್ನು ನಿತ್ಯ ಬದುಕಿಗೆ ಅಳವಡಿಸಿಕೊಳ್ಳುವ ಬಗ್ಗೆ ಮಕ್ಕಳಲ್ಲಿ ತಿಳಿಹೇಳಬೇಕಿದೆ ಎಂದರು.
ಶಿಕ್ಷಕ ಟಿ.ಎಂ.ಮಧು ಮಾತನಾಡಿ, ದೈಹಿಕ ಮತ್ತು ಮಾನಸಿಕ ಆರೋಗ್ಯದ ಔನತ್ಯದ ಗುಣಮಟ್ಟ ಸಾಧಿಸಲು ಧ್ಯಾನವೊಂದು ಉತ್ತಮ ಮಾರ್ಗವಾಗಿದೆ. ಜೀವನವನ್ನು ಸಾರ್ಥಕಗೊಳಿಸಿಕೊಳ್ಳಲು ಅಗತ್ಯವಾದ ಶರೀರವನ್ನು ಚೆನ್ನಾಗಿಯೂ, ಹತೋಟಿಯಲ್ಲಿಯೂ ಇಟ್ಟುಕೊಳ್ಳಲು, ಮನಸ್ಸಿನ ಏಕಾಗ್ರತೆಯನ್ನು ಸಾಧಿಸಲು ನಿಯಮಿತ ಮತ್ತು ನಿರಂತರ ಧ್ಯಾನವು ಅನಿವಾರ್ಯವಾಗಿದೆ ಎಂದರು.
ಜನಾಕರ್ಷಿಸಿದ ಸಂತೆ: ಗಣಿತ ದಿನಾಚರಣೆ ಅಂಗವಾಗಿ ಶಾಲಾ ಮುಂಭಾಗದಲ್ಲಿ ಮಕ್ಕಳಿಂದ ನಡೆದ ಮಕ್ಕಳಸಂತೆಯಲ್ಲಿ ಹಣ್ಣು, ತರಕಾರಿ, ಶುಚಿಯಾದ ಆಹಾರಪದಾರ್ಥಗಳನ್ನು ಮಕ್ಕಳೇ ತೂಕ ಮಾಡಿ ಮಾರಾಟ ಮಾಡಿದ್ದು ಜನರನ್ನು ಆಕರ್ಷಿಸಿತು. ಗ್ರಾಮಸ್ಥರು ಮಕ್ಕಳಿಂದ ವಸ್ತುಗಳನ್ನು ಖರೀದಿಸಿ ಪ್ರೋತ್ಸಾಹಿಸಿದರು. ಮಕ್ಕಳೇ ಗಣಿತದ ಕಲಿಕೆಗಾಗಿ ತಯಾರಿಸಿದ್ದ ವಿವಿಧ ಕಲಿಕಾಸಾಮಗ್ರಿಗಳ ಪ್ರದರ್ಶನವು ಪೋಷಕರ ಮನಸೆಳೆಯಿತು. ವಿವಿಧ ಸ್ಪರ್ಧೆಗಳನ್ನು ನಡೆಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ್, ಗ್ರಾಮಪಂಚಾಯಿತಿ ಮಾಜಿ ಸದಸ್ಯ ಎನ್.ಅಶ್ವತ್ಥಪ್ಪ, ಡಿ.ದೇವರಾಜು, ಪೋಷಕರು ಹಾಜರಿದ್ದರು.