Sidlaghatta : ಶಿಡ್ಲಘಟ್ಟ ನಗರದ ಚಿಂತಾಮಣಿ ರಸ್ತೆಯ ಸೇಕ್ರೆಡ್ ಹಾರ್ಟ್ ಚರ್ಚ್, ದಿಬ್ಬೂರಹಳ್ಳಿ ರಸ್ತೆಯ ಎಬೆನೆಜರ್ ಮಾರ್ತೋಮ ಚರ್ಚ್, ನೆಲ್ಲಿಮರದಹಳ್ಳಿಯ ಇಮ್ಮಾನುವೇಲ್ ಚರ್ಚ್ ಹಾಗೂ ತಾಲ್ಲೂಕಿನ ವಿವಿದೆಡೆಗಳಲ್ಲಿರುವ ಚರ್ಚ್ ಗಳನ್ನು ಬುಧವಾರ ಕ್ರಿಸ್‌ಮಸ್ ಪ್ರಯುಕ್ತ ಬಣ್ಣಬಣ್ಣದ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಮೇಣದ ಬತ್ತಿಗಳನ್ನು ಬೆಳಗುವ ಮೂಲಕ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಜಾತಿ ಬೇದವಿಲ್ಲದೆ ಹಲವಾರು ಮಂದಿ ವಿವಿಧ ಚರ್ಚ್ ಗಳಿಗೆ ಭೇಟಿ ನೀಡಿ ಮೇಣದ ಬತ್ತಿಗಳನ್ನು ಬೆಳಗಿ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಪ್ರತಿ ಚರ್ಚ್ ನ ಅಂಗಳದಲ್ಲಿ, ಕ್ರಿಶ್ಚಿಯನ್ನರ ಮನೆ ಏಸು ಜನಿಸಿದ ಗೋದಲಿಯ ಪ್ರತಿಕೃತಿಯನ್ನು ಮಾಡಲಾಗಿತ್ತು. ಕ್ರಿಬ್ ಅಥವಾ ಗೋದಲಿಯಲ್ಲಿ ಬೆತ್ಲೆಹೆಮ್ ನ ಬೆಟ್ಟ ಗುಡ್ಡ, ಕಣಿವೆಗಳು, ಜಾರುವ ಝರಿ, ಇಳಿದು ಬರುವ ತೊರೆ, ಗದ್ದೆಗಳ ಹಸಿರಿನ ನಡುವೆ ದೈವಿಕ, ಮಾನವಿಕ ಪ್ರತಿಮೆಗಳು, ಪ್ರಾಣಿ, ಪಕ್ಷಿಗಳ ಮೂರ್ತಿಗಳು ಮರು ಸಷ್ಟಿಪಡೆದಿತ್ತು. ಸಿಂಗಾರಗೊಂಡ ಗೋದಲಿಯಲ್ಲಿ ಬಾಲ ಏಸುವಿನ ಮುಖವನ್ನು ಬಂದವರೆಲ್ಲ ಭಕ್ತಿಭಾವದಿಂದ ಕಾಣುತ್ತಿದ್ದರು.
ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ತಾಲ್ಲೂಕಿನ ಎಲ್ಲಾ ಚರ್ಚುಗಳಲ್ಲಿ ವಿವಿಧ ರೀತಿಗಳಲ್ಲಿ ಆಚರಣೆ ಮಾಡುತ್ತಾ ಬಂದಿದ್ದು, ಏಸುವಿನ ಸಂದೇಶವನ್ನು ಜನರಿಗೆ ತಿಳಿಸಲಾಗುತ್ತಿದೆ.