Sidlaghatta : ಶಿಡ್ಲಘಟ್ಟ ಅಂತರಜಿಲ್ಲಾ ಕುರಿ ಮತ್ತು ಹಸು ಕಳ್ಳತನ ಮಾಡುತ್ತಿದ್ದ ಫೈರೋಜ್ ಅಲಿಯಾಸ್ ಅಫ್ರೋಜ್ ಹಾಗು ಸತೀಶ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ 4 ಲಕ್ಷ 37 ಸಾವಿರ ನಗದು, 17 ಕುರಿಗಳು, ಹಾಗು ಕೃತ್ಯಕ್ಕೆ ಬಳಸಿದ ಎರಡು ಹೊಂಡೈ ಸ್ಯಾಂಟ್ರೋ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚಿಂತಾಮಣಿ ಉಪ ವಿಭಾಗದ ಎಎಸ್ಪಿ ಕುಶಾಲ್ಚೌಕ್ಸೆ ತಿಳಿಸಿದರು.
ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಳೆದ ಅಕ್ಟೋಬರ್ ೧೮ ರಂದು ತಾಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಗಾಂಡ್ಲಚಿಂತೆ ಗ್ರಾಮದ ಶ್ರೀನಿವಾಸ್ ಬಿನ್ ಮುದ್ದಲಪ್ಪ ಹಾಗು ಅದೇ ಗ್ರಾಮದ ಜಿ.ವಿ.ವೆಂಕಟರಾಯಪ್ಪ ಎಂಬುವವರಿಗೆ ಸೇರಿದ ಸುಮಾರು 24 ಕುರಿಗಳನ್ನು ಯಾರೋ ಕಳ್ಳತನ ಮಾಡಿದ್ದಾರೆ ಎಂಬ ದೂರಿನ ಮೇರೆಗೆ ಆರಕ್ಷಕ ವೃತ್ತ ನಿರೀಕ್ಷಕ ಬಿ.ಎಸ್. ನಂದಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಹೊಸಕೋಟೆ ತಾಲೂಕು ಬೈಲನರಸಾಪುರ ಗ್ರಾಮದ ಫೈರೋಜ್ ಅಲಿಯಾಸ್ ಅಫ್ರೋಜ್ ಹಾಗು ತಮಿಳುನಾಡಿನ ಕಾಮರಾಜನಗರದ ಸತೀಶ್ ಎಂಬ ಇಬ್ಬರು ಆರೋಪಿಗಳನ್ನು ಬಂದಿಸಲಾಗಿದೆ. ಆರೋಪಿಗಳು ನೆರೆಯ ಜಿಲ್ಲೆಗಳ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಸಂಶಯವಿದ್ದು ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದರು.
ಎ.ಎಸ್.ಪಿ. ಕುಶಲ್ ಚೌಕ್ಸೆ ಮಾರ್ಗದರ್ಶನದಲ್ಲಿ ಈ ಪತ್ತೆ ಕಾರ್ಯದ ತಂಡದ ನೇತೃತ್ವ ವಹಿಸಿದ್ದ ಸರ್ಕಲ್ ಇನ್ಸ್ಪೆಕ್ಟರ್ ಬಿ.ಎಸ್.ನಂದಕುಮಾರ್, ದಿಬ್ಬೂರಹಳ್ಳಿ ಪಿಎಸ್ಸೈ ಕೃಷ್ಣಪ್ಪ, ಪ್ರೋ.ಪಿ.ಸ್.ಐಗಳಾದ ಹರೀಶ್, ಸೌಜನ್ಯ, ಎಎಸ್ಸೈ ಹರೀಶ್, ಮತ್ತು ಸಿಬ್ಬಂದಿ ನಟರಾಜಚಾರಿ, ನಂದಕುಮಾರ್, ಲೋಕೇಶ್, ಶಿವಣ್ಣ, ಲಕ್ಷ್ಮಿ, ಮತ್ತಿತರರ ಕಾರ್ಯ ಶ್ಲಾಘನೀಯ ಎಂದರು.