Bagapalli : ಕಾರ್ಮಿಕರ ಹಕ್ಕುಗಳನ್ನು ಕಿತ್ತುಕೊಳ್ಳುವ ನವ ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು ಮತ್ತು ದುಡಿಯುವ ವರ್ಗಗಳ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ಒದಗಿಸಬೇಕು ಎಂಬ ಬೇಡಿಕೆಯಿಂದ ಮೇ 20ರಂದು ನಡೆಯುವ ದೇಶವ್ಯಾಪಿ ಸಾಮಾನ್ಯ ಮುಷ್ಕರಕ್ಕೆ (all india general strike pre meeting) ಬಾಗೇಪಲ್ಲಿ ತಾಲ್ಲೂಕು ಮಟ್ಟದಲ್ಲೂ ಸಜ್ಜಾಗಲಾಗಿದೆ. ಈ ಕುರಿತು ಮಂಗಳವಾರ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಪ್ರಾಂತ ಕೃಷಿಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಪಿ. ಮುನಿವೆಂಕಟಪ್ಪ ಮಾತನಾಡಿ, “ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದುಡಿಯುವ ಜನರ ಹಿತವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ. ಇದೇ ಕಾರಣಕ್ಕೆ ಮೇ 20 ರಂದು ರಾಷ್ಟ್ರವ್ಯಾಪಿ ಮುಷ್ಕರದ ಆವಶ್ಯಕತೆ ಎದುರಾಗಿದೆ” ಎಂದು ಹೇಳಿದರು.
ಸಿಐಟಿಯು ತಾಲ್ಲೂಕು ಕಾರ್ಯದರ್ಶಿ ಮುಸ್ತಾಫ, ರೈತ ಸಂಘದ ಜಿಲ್ಲಾಧ್ಯಕ್ಷ ಟಿ. ಲಕ್ಷ್ಮೀನಾರಾಯಣರೆಡ್ಡಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಕೆ.ಎನ್. ಹರೀಶ್ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ತಮ್ಮ ಬೆಂಬಲ ವ್ಯಕ್ತಪಡಿಸಿದರು.
ಮುಷ್ಕರದ ಅಂಗವಾಗಿ ಡಾ.ಎಚ್.ಎನ್ ವೃತ್ತದಿಂದ ಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಸಲಾಗುವುದು. ಹೋಬಳಿ ಮತ್ತು ಗ್ರಾಮ ಮಟ್ಟದಲ್ಲಿ ಪಂಪ್ಲೆಟ್ ಹಂಚಿಕೆ, ಪ್ರಚಾರದ ಮೂಲಕ ಜನಜಾಗೃತಿ ಮೂಡಿಸಲು ತೀರ್ಮಾನಿಸಲಾಯಿತು.