Chikkaballapur : ಭಾನುವಾರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಳೆಗೆ ಹಾನಿಯಾಗಿರುವ ಕೆಲ ಪ್ರದೇಶಗಳಿಗೆ ಮುಖ್ಯಮಂತ್ರಿ ಬೊಮ್ಮಾಯಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರದ ಬಿಬಿ ರಸ್ತೆಯಲ್ಲಿ ಕಂದವಾರ ಕೆರೆಯಿಂದ ಅಮಾನಿಗೋಪಾಲಕೃಷ್ಣಕೆರೆಗೆ ನೀರು ಹರಿಯುತ್ತಿರುವ ಕಾಲುವೆಯನ್ನು ಮೊದಲಿಗೆ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಪರಿಶೀಲನೆ ನಂತರ ಮಾತನಾಡಿದ ಮುಖ್ಯಮಂತ್ರಿಗಳು ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಲು ಬಂದಿದ್ದೇನೆ, ಕಂದವಾರ ಕೆರೆಯಿಂದ ಅಮಾನಿಗೋಪಾಲಕೃಷ್ಣ ಕೆರೆಗೆ ರಾಜಕಾಲುವೆ ನಿರ್ಮಿಸಲು ಎಷ್ಟು ಹಣ ಅಗತ್ಯವಿದೆಯೋ ಅದನ್ನು ಬಿಡುಗಡೆ ಮಾಡಲಾಗುವುದು. ಇದಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲಾಧಿಕಾರಿ ಅವರ ಮಾಹಿತಿಯ ಪ್ರಕಾರ ಜಿಲ್ಲೆಯಲ್ಲಿ 24 ಮನೆಗಳು ಪೂರ್ಣವಾಗಿ ಬಿದ್ದಿವೆ. 1078 ಮನೆಗಳು ಭಾಗಶಃ ಹಾನಿಗೆ ಒಳಗಾಗಿವೆ. ಮನೆಗಳಿಗೆ ನೀರು ನುಗ್ಗಿರುವ ಕಡೆಗಳಲ್ಲಿ ₹ 10 ಸಾವಿರ, ಪೂರ್ಣ ಬಿದ್ದ ಮನೆಗಳ ಮಾಲೀಕರಿಗೆ ತಕ್ಷಣವೇ ₹ 85 ಸಾವಿರ ನಂತರ ₹ 5 ಲಕ್ಷ, ಭಾಗಶಃ ಬಿದ್ದ ಮನೆಗಳ ಮಾಲೀಕರಿಗೆ ₹ 3 ಲಕ್ಷ ಹಾಗೂ ಅಲ್ಪಪ್ರಮಾಣದಲ್ಲಿ ಹಾನಿ ಆಗಿದ್ದರೆ ₹ 50 ಸಾವಿರ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಈ ಸಮಯದಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಮಳೆ ಪೀಡಿತ ಹಳ್ಳಿಗಳಿಗೆ ಭೇಟಿ ನೀಡಿದ ಮುಖ್ಯಮಂತ್ರಿಗಳು, ನಲ್ಲೋಜನಹಳ್ಳಿ ಅಗ್ರಹಾರದ ಕೆರೆ ಒಡೆದು ನೀರು ಹರಿದು ಅಪಾರ ಬೆಳೆ ನಾಶವಾಗಿದೆ ಮತ್ತು ಇಲ್ಲಿ ನಿಲ್ಲಬೇಕಾದ ನೀರು ಆಂಧ್ರದ ಕಡೆಗೆ ಹರಿದು ಹೋಗಿರುವುದು ದುರದೃಷ್ಟಕರ. ಈ ಕೆರೆ ನಮಗೆ ಬಹಳ ಮುಖ್ಯ. ಅದಕ್ಕಾಗಿಯೇ ಇದರ ವೀಕ್ಷಣೆಗೆ ಬಂದಿದ್ದೇನೆ. ಇಲ್ಲಿ ಪರಿಸ್ಥಿತಿಯನ್ನು ನೋಡಿ, ಗ್ರಾಮಸ್ಥರೊಂದಿಗೆ ಮಾತನಾಡಿ, ಸಚಿವರುಗಳು, ಸಂಸದರು, ಎಂಜಿನಿಯರುಗಳೊಂದಿಗೆ ಚರ್ಚಿಸಿ ಇದಕ್ಕೆ ಶಾಶ್ವತವಾಗಿ ಉಳಿಯುವಂತಹ ಬಂಡ್ ನಿರ್ಮಾಣ ಮಾಡಬೇಕೆಂದು ತೀರ್ಮಾನಿಸಿದ್ದೇವೆ. ಮೊದಲು ನೀರು ಉಳಿಸಿಕೊಳ್ಳುವ ಕ್ರಮ ಕೈಗೊಳ್ಳಲು ಸೂಚಿಸಿರುವೆನು ಎಂದರು.
ಸಂಪರ್ಕ ಕಡಿತವಾಗಿರುವೆಡೆ ರಸ್ತೆ, ಸೇತುವೆ ಮುಂತಾದವುಗಳ ನಿರ್ಮಾಣ ಮಾಡಿ ಸಂಪರ್ಕ ಕಲ್ಪಿಸುವುದು ನಮ್ಮ ಪ್ರಥಮ ಪ್ರಾಶಸ್ತ್ಯವಾಗಿದೆ. ವಿದ್ಯುತ್ ಕಂಬಗಳು ಬಿದ್ದು, ಸಂಪರ್ಕ ಕಡಿತವಾಗಿದ್ದರೆ ಅದನ್ನು ಸರಿಪಡಿಸುವುದು ಎರಡನೇ ಪ್ರಾಶಸ್ತ್ಯದ ಕೆಲಸ. ಇಲ್ಲಿ ಎರಡು ರೀತಿಯ ಸಮೀಕ್ಷೆಗಳಿವೆ. ಒಂದು ಕಣ್ಣೋಟದಿಂದ ಮಾಡುವಂತಹದ್ದು, ಮತ್ತೊಂದು ಕೃಷಿ, ಕಂದಾಯ, ತೋಟಗಾರಿಕೆ, ರೇಷ್ಮೆ ಮುಂತಾದ ಇಲಾಖೆಗಳ ಜಂಟಿ ಸಮೀಕ್ಷೆಯ ವರದಿಯನ್ನು ಆಧರಿಸುವಂತಹದ್ದು.
ಇಡೀ ರಾಜ್ಯದ ಮಾಹಿತಿಯನ್ನು ಪಡೆಯುವವನಿದ್ದೇನೆ. ಬೆಳೆ, ವಸ್ತು, ಮನೆಗಳು, ರಸ್ತೆ ಮುಂತಾದ ಹಾನಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುವೆನು. ಈಗ ಸಿಕ್ಕಿರುವ ಪ್ರಾಥಮಿಕ ಮಾಹಿತಿಯಂತೆ ಐದು ಲಕ್ಷ ಹೆಕ್ಟೇರ್ ಗೂ ಅಧಿಕ ಬೆಳೆ ನಾಶವಾಗಿದೆ. 40 ಸಾವಿರ ಮನೆಗಳು ಬಿದ್ದಿರುವ ಮಾಹಿತಿ ಲಭಿಸಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್, ಕಂದಾಯ ಸಚಿವ ಆರ್.ಅಶೋಕ್, ಸಂಸದ ಎಸ್.ಮುನಿಸ್ವಾಮಿ, ಜಿಲ್ಲಾಧಿಕಾರಿ ಆರ್.ಲತಾ, ಎಸ್‌ಪಿ ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಪಿ.ಶಿವಶಂಕರ್ ಮುಖ್ಯಮಂತ್ರಿಗಳ ಜೊತೆ ಸ್ಥಳವನ್ನು ಪರಿಶೀಲಿಸಿದರು