Chikkaballapur : ಕರೋನದಿಂದ ಸುಮಾರು ಒಂದೂವರೆ ವರ್ಷದಿಂದ ಮುಚಲ್ಪಟ್ಟ ಅಂಗನವಾಡಿ ಕೇಂದ್ರಗಳನ್ನು ಸೋಮವಾರ ‘ಅಂಗನವಾಡಿ ಮಕ್ಕಳ ಪ್ರವೇಶೋತ್ಸವ’ ಎಂಬ ಕಾರ್ಯಕ್ರಮದ ಅಡಿಯಲ್ಲಿ ಜಿಲ್ಲೆಯಾದ್ಯಂತ ಪ್ರಾರಂಭಿಸಲಾಯಿತು. ಜಿಲ್ಲೆಯ ಅನೇಕ ಕಡೆ ಮಕ್ಕಳಿಗೆ ಸಿಹಿ ವಿತರಿಸುವ ಮೂಲಕ ಅಂಗನವಾಡಿ ಕಾರ್ಯಕರ್ತೆಯರು ಪ್ರೀತಿಯಿಂದ ಬರಮಾರಿಕೊಂಡರು.
ಚಿಕ್ಕಬಳ್ಳಾಪುರ :
ಚಿಕ್ಕಬಳ್ಳಾಪುರ ನಗರದ ಎಚ್.ಎಸ್ ಗಾರ್ಡನ್ ಅಂಗನವಾಡಿ ಕೇಂದ್ರದಲ್ಲಿ ಜಿಲ್ಲಾಡಳಿತ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ‘ಅಂಗನವಾಡಿ ಮಕ್ಕಳ ಪ್ರವೇಶೋತ್ಸವ’ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಆರ್.ಲತಾ ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು ಅಂಗನವಾಡಿಗೆ ಬರುವ ಪ್ರತಿ ಮಗುವಿನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು, ಅಂಗನವಾಡಿ ಕೇಂದ್ರಗಳಲ್ಲಿ ಸರ್ಕಾರದ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಜಿಲ್ಲೆಯ ಯಾವ ಮಗುವಿಗೂ ಕೋವಿಡ್ ಸೋಂಕು ಹರಡದಂತೆ ಹೆಚ್ಚಿನ ಗಮನವಹಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ನಗರಸಭೆ ಅಧ್ಯಕ್ಷ ಆನಂದ ರೆಡ್ಡಿ ಬಾಬು, ಪೌರಾಯುಕ್ತ ಮಹಂತೇಶ್, ನಗರಸಭೆ ಸದಸ್ಯರಾದ ಸ್ವಾತಿ ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಅಶ್ವತ್ಥಮ್ಮ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಂಗಾಧರ್ ಭಾಗವಹಿಸಿದ್ದರು.
ಬಾಗೇಪಲ್ಲಿ :
ತಾಲ್ಲೂಕಿನ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆಯರು ಮಕ್ಕಳಿಗೆ ತಿಲಕವಿಟ್ಟು, ಗುಲಾಬಿ ಹೂವುಗಳನ್ನು ನೀಡಿ, ದೀಪ ಬೆಳಗಿಸುವ ಮೂಲಕ ಅಂಗನವಾಡಿ ಕೇಂದ್ರಗಳಿಗೆ ಬರಮಾರಿಕೊಂಡರು. ತಾಲ್ಲೂಕಿನ ದೇವರಗುಡಿಪಲ್ಲಿ, ಮಿಟ್ಟೇಮರಿ ಸೇರಿದಂತೆ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಸೋಮವಾರ ಬೆಳಿಗ್ಗೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಕೇಂದ್ರಗಳಿಗೆ ಬಣ್ಣ ಬಣ್ಣದ ಹೂವು ಹಾಗೂ ಬಲೂನ್‌ಗಳಿಂದ ಸಿಂಗರಿಸಿದ್ದರು.
ಗುಡಿಬಂಡೆ :
ತಾಲ್ಲೂಕಿನ ಅನೇಕ ಅಂಗನವಾಡಿ ಕೇಂದ್ರ ಹಾಗೂ ಸರ್ಕಾರಿ ಕೆಪಿಎಸ್ ಶಾಲೆಯಲ್ಲಿನ ಎಲ್‌ಕೆಜಿ, ಯುಕೆಜಿ ತರಗತಿಗಳು ಪ್ರಾರಂಭವಾಗಿದ್ದು ಮಕ್ಕಳಿಗೆ ಸಿಹಿ ನೀಡುವ ಮೂಲಕ ಶಾಲಾ ಶಿಕ್ಷಕರು ಸ್ವಾಗತಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ದಿ ಅಧಿಕಾರಿ ರಫೀಕ್ ಮಾತನಾಡಿ, ತಾಲ್ಲೂಕಿನ ಅಂಗನವಾಡಿ ಕೇಂದ್ರಗಳನ್ನು 19 ತಿಂಗಳ ನಂತರ ಸರ್ಕಾರದ ಕೋವಿಡ್ ಮಾರ್ಗಸೂಚಿಗಳಂತೆ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ಶಿಡ್ಲಘಟ್ಟ :
ತಾಲ್ಲೂಕಿನೆಲ್ಲೆಡೆ ಅಂಗನವಾಡಿಯ ಪುನರಾರಂಭವನ್ನು ವಿಶೇಷವಾಗಿ ಆಚರಿಸಲಾಯಿತು. ಕೆಲವೆಡೆ ಸರಸ್ವತಿಪೂಜೆ ಮಾಡಿದರೆ, ಬಹುತೇಕ ಕಡೆಗಳಲ್ಲಿ ಮಕ್ಕಳಿಗೆ ಹೂ ಮತ್ತು ಸಿಹಿ ನೀಡಿ ಸ್ವಾಗತಿಸಲಾಯಿತು. ತಾಲ್ಲೂಕಿನ ಆನೂರಿನ ಅಂಗನವಾಡಿಗೆ ಆಗಮಿಸಿದ ಚಿಣ್ಣರಿಗೆ ಅಂಗನವಾಡಿ ಕಾರ್ಯಕರ್ತೆಯರು ಹೂ ಮತ್ತು ಚಾಕೊಲೇಟ್ ನೀಡಿ ಸ್ವಾಗತಿಸಿದ್ದರು, ವೀರಾಪುರದ ಅಂಗನವಾಡಿಯಲ್ಲಿ ಮಕ್ಕಳಿಗೆಲ್ಲಾ ಹೂ ನೀಡಿ ಸ್ವಾಗತ ಕೋರಲಾಯಿತು. ತಾಲ್ಲೂಕಿನ ಜಂಗಮಕೋಟೆಯ ಅಂಗನವಾಡಿ ಕೇಂದ್ರದಲ್ಲಿ ಸರಸ್ವತಿ ಪೂಜೆ ಮಾಡುವ ಮೂಲಕ ಅಂಗನವಾಡಿಯನ್ನು ಪ್ರಾರಂಭಿಸಲಾಯಿತು.
ಗೌರಿಬಿದನೂರು :
ತಾಲೂಕಿನ ಅನೇಕ ಅಂಗನವಾಡಿಗಳು ಕೋವಿಡ್ ನಂತರ ಸೋಮವಾರ ಪುನರಾರಂಭಗೊಂಡಿತ್ತು. ವಾಟದಹೊಸಹಳ್ಳಿ ಗ್ರಾಮ ಪಂಚಾಯಿತಿಯ 1ನೇ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳನ್ನು ಸಿಹಿ ನೀಡಿ, ಹೂವಿನ ಹಾದಿಯ ಮೇಲೆ ವಿನೂತನವಾಗಿ ಬರಮಾಡಿಕೊಳ್ಳಲಾಯಿತು.