Chikkaballapur : ಅಪಾರ ಸಂಖ್ಯೆಯ ಕಾರ್ಯಕರ್ತರು ಮತ್ತು ಮುಖಂಡರೊಂದಿಗೆ ಬುಧವಾರ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ (Lokasabha Election) Congress ಅಭ್ಯರ್ಥಿ ರಕ್ಷಾ ರಾಮಯ್ಯ (Raksha Ramaih) ಚಿಕ್ಕಬಳ್ಳಾಪುರ ನಗರದ ಒಕ್ಕಲಿಗರ ಕಲ್ಯಾಣ ಮಂಟಪದಿಂದ ಶಿಡ್ಲಘಟ್ಟ ವೃತ್ತದ ವರೆಗೆ ರೋಡ್ ಷೊ ನಡೆಸಿ ನಾಮಪತ್ರ (Nomination) ಸಲ್ಲಿಸಿದರು.
ಇದಕ್ಕೂ ಮುನ್ನ ಆಂಜನೇಯ ದೇವಸ್ಥಾನ ಮತ್ತು ಕೈವಾರ ತಾತಯ್ಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಅಂಬೇಡ್ಕರ್, ಕನಕದಾಸರು, ಕೆ.ಬಿ. ಪಿಳ್ಳಪ್ಪ ಮತ್ತು ಕೆಂಪೇಗೌಡರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ರಕ್ಷರಾಮಯ್ಯ “ರಾಜ್ಯಕ್ಕೆ ಬಿಜೆಪಿಯಿಂದ ದೊಡ್ಡ ಪ್ರಮಾಣದಲ್ಲಿ ಅನ್ಯಾಯವಾಗುತ್ತಿದ್ದು ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲು ಪಡೆಯಲು ಕೇಂದ್ರ ಮಟ್ಟದಲ್ಲಿ ಹೋರಾಟ ನಡೆಸುತ್ತೇನೆ. ಕ್ಷೇತ್ರದ ಧ್ವನಿಯಾಗಿ, ರಾಜ್ಯದ ಪರವಾಗಿ ಕೇಂದ್ರದಲ್ಲಿ ಹೋರಾಟ ಮಾಡುತ್ತೇನೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮತದಾರರೇ ಅಭ್ಯರ್ಥಿಗಳು. ನಿಮ್ಮ ಆಶೀರ್ವಾದವೇ ನನಗೆ ಶ್ರೀರಕ್ಷೆ. ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಲ್ಲಿ ಸಂವಿಧಾನ ಬದಲಿಸಲಿದೆ. ಹೀಗಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಿರಿಯ ಮುಖಂಡರಾದ ರಾಹುಲ್ ಗಾಂಧಿ ಅವರಿಗೆ ಶಕ್ತಿ ತುಂಬುವ ಕೆಲಸ ಆಗಬೇಕು” ಎಂದು ಮನವಿ ಮಾಡಿದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಸಚಿವ ಕೆ.ಎಚ್. ಮುನಿಯಪ್ಪ, ಡಾ.ಎಂ.ಸಿ. ಸುಧಾಕರ್, ಶಾಸಕ ಪ್ರದೀಪ್ ಈಶ್ವರ್, ಶರತ್ ಬಚ್ಚೇಗೌಡ, ಸುಬ್ಬಾರೆಡ್ಡಿ, ಕೆ.ಎಚ್. ಪುಟ್ಟಸ್ವಾಮಿ ಗೌಡ, ವಿಧಾನ ಪರಿಷತ್ ಸದಸ್ಯ ರವಿ, ಮಾಜಿ ಶಾಸಕ ವೆಂಕಟರಮಣಯ್ಯ, ಕೆ.ಪಿ.ಬಚ್ಚೇಗೌಡ ಹಾಗೂ ಮುಖಂಡರು ರೋಡ್ ಶೋನಲ್ಲಿ ಭಾಗಿಯಾದರು.