Gudibande : ಗುಡಿಬಂಡೆ ತಾಲ್ಲೂಕು ಕಚೇರಿಯಲ್ಲಿ ಬುಧವಾರ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ (SN Subbareddy) ಅವರ ಅಧ್ಯಕ್ಷತೆಯಲ್ಲಿ ಬಗರ್‌ಹುಕುಂ ಅಕ್ರಮ ಸಕ್ರಮ ಸಮಿತಿ ಸಭೆ (Bagair Hukum land settlement Meeting) ನಡೆಯಿತು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, “ಒಟ್ಟು 21 ಅರ್ಜಿಗಳನ್ನು ಪರಿಶೀಲಿಸಿ, ಸುಮಾರು 36.8 ಎಕರೆ ಸರ್ಕಾರಿ ಜಮೀನನ್ನು ಇತ್ಯರ್ಥ ಮಾಡಲಾಗಿದೆ,” ಎಂದು ಮಾಹಿತಿ ನೀಡಿದರು.
“ರೈತರು ಮತ್ತೆ ಮತ್ತೆ ಖಾತೆಗಾಗಿ ಕಚೇರಿಗೆ ಬರುತ್ತಿರುವ ಪರಿಸ್ಥಿತಿಯ ಅವಶ್ಯಕತೆಯಿಲ್ಲ. ಕಂದಾಯ ಇಲಾಖೆಯ ಅಧಿಕಾರಿಗಳು ನೇರವಾಗಿ ಜಮೀನುಗಳಿಗೆ ಭೇಟಿ ನೀಡಿ, ಸರ್ವೆ, ಖಾತಾ, ಪೋಡಿ, ದುರಸ್ತಿ ಸೇರಿದಂತೆ ಪಹಣಿ ಮತ್ತು ಸಾಗುವಳಿ ಚೀಟಿ ವಿತರಣೆ ಮಾಡಲಿದ್ದಾರೆ. ಅಲ್ಲದೆ, ನಮೂನೆ 53ರ ಅಡಿಯಲ್ಲಿ ಇನ್ನೂ 900 ಅರ್ಜಿಗಳು ಬಾಕಿಯಿದ್ದು, ಅವುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುವುದು. ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಒಂದೇ ದಿನದಲ್ಲಿ 21 ಅರ್ಜಿಗಳನ್ನು ಇತ್ಯರ್ಥ ಪಡಿಸುವ ಸಾಧನೆ ನಡೆದಿದೆ. ಇದಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸಿದ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ” ಎಂದು ಶಾಸಕ ಸುಬ್ಬಾರೆಡ್ಡಿ ತಿಳಿಸಿದರು.
ಸಭೆಯಲ್ಲಿ ತಹಶೀಲ್ದಾರ್ ಸಿಕ್ಬತುಲ್ಲ, ಸಮಿತಿ ಸದಸ್ಯರಾದ ಚಂದ್ರಶೇಖರ್ ರೆಡ್ಡಿ, ನರಸಿಂಹಮೂರ್ತಿ, ಡಿ. ಪರಿಮಳಾ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.