Home News Chikkaballapur ‘ಈಶಾ’ ವಿರುದ್ಧ ಅಕ್ರಮದ ಆರೋಪ

‘ಈಶಾ’ ವಿರುದ್ಧ ಅಕ್ರಮದ ಆರೋಪ

0

Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ಆವಲಗುರ್ಕಿಯ ಈಶಾ ಯೋಗ ಕೇಂದ್ರವು (Isha Yoga Centre, Chikkaballapur) ಯಾವುದೇ ಗ್ರಾಮ ಪಂಚಾಯಿತಿ ಪರವಾನಗಿಯನ್ನು ಪಡೆಯದೇ ಕಟ್ಟಡ ನಿರ್ಮಿಸುತ್ತಿದ್ದು, ಸರ್ಕಾರದ ಜಮೀನು ಅತಿಕ್ರಮಣ, ಪರಿಸರ ಹಾನಿ, ಮತ್ತು ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿದೆ ಎಂಬ ಗಂಭೀರ ಆರೋಪವನ್ನು ವಕೀಲ ನಾರಾಯಣಸ್ವಾಮಿ ಮಾಡಿದ್ದಾರೆ.

Isha Yoga Centre Chikkaballapur controversy

ಬುಧವಾರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈಶಾ ಯೋಗ ಸಂಸ್ಥೆ ವಿದ್ಯಾಸಂಸ್ಥೆ ನಿರ್ಮಾಣದ ಹೆಸರಿನಲ್ಲಿ ಸುಮಾರು 83 ಎಕರೆ ಜಮೀನು ಖರೀದಿಸಿದೆ. ಆದರೆ ಖರೀದಿಯ ಉದ್ದೇಶ ಹಾಗೂ ನಿರ್ಮಾಣ ಚಟುವಟಿಕೆಗಳು ಪರಸ್ಪರ ಹೊಂದಿಕೆಯಾಗುತ್ತಿಲ್ಲ ಎಂದು ಆರೋಪಿಸಿದರು.

ಪಂಚಾಯತಿ ಅನುಮತಿ ಇಲ್ಲದೆ ಕಟ್ಟಡಗಳು ಹಾಗೂ ಆದಿಯೋಗಿ ಪ್ರತಿಮೆ ನಿರ್ಮಿಸಲಾಗಿದ್ದು, ಸರ್ಕಾರಿ ಭೂಮಿಯಲ್ಲಿ ರಸ್ತೆ ನಿರ್ಮಿಸಿ ಸಾರ್ವಜನಿಕರಿಂದ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಅಲ್ಲದೆ, ಸೂರ್ಯಕುಂಡ ಹಾಗೂ ಚಂದ್ರಕುಂಡಗಳ ನಿರ್ಮಾಣಕ್ಕೂ ಮುಂದಾಗಿರುವ ಈಶಾ ಸಂಸ್ಥೆ, ಸ್ನಾನಕ್ಕೆ ₹500 ಶುಲ್ಕ ವಿಧಿಸುತ್ತಿದೆ ಎಂದು ದೂರಿದರು.

“ಲೇಸರ್ ಶೋಗಳಿಂದ ಅರಣ್ಯ ಪ್ರಾಣಿಗಳು ಅಸ್ವಸ್ಥರಾಗಿವೆ, ಪರಿಸರದ ಸಮತೋಲನ ಹದಗೆಡುತ್ತಿದೆ. ಜಿಲ್ಲಾಡಳಿತ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಈಶಾ ಸಂಸ್ಥೆಯ ಅಕ್ರಮಗಳು ಮುಂದುವರೆದರೆ, ಯೋಗ ಕೇಂದ್ರದ ಸಂಪರ್ಕ ರಸ್ತೆಗಳನ್ನೆಲ್ಲಾ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದೇವೆ” ಎಂದು ನಾರಾಯಣಸ್ವಾಮಿ ಹೇಳಿದರು.

ಮುಸ್ಟೂರು ಶ್ರೀಧರ್ ಮಾತನಾಡುತ್ತಾ, “ರೈತರು ಬೆಟ್ಟ ಅಗೆದರೆ ಅಧಿಕಾರಿಗಳು ತಕ್ಷಣ ದಂಡ ವಿಧಿಸುತ್ತಾರೆ. ಆದರೆ ಈಶಾದ ಅಕ್ರಮಗಳ ಬಗ್ಗೆ ಕಣ್ಣು ಮುಚ್ಚಿದ್ದಾರೆ,” ಎಂದು ಕಿಡಿಕಾರಿದರು.

ಪ್ರತಿವರ್ಷ ಜ.1ರಂದು ನಂದಿಗಿರಿಧಾಮಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗುತ್ತದೆ. ಇದು ಸರ್ಕಾರದ ಆದಾಯಕ್ಕೆ ನಷ್ಟ ತಂದೊಡುತ್ತದೆ. ಆದರೆ ಈಶಾ ಯೋಗ ಕೇಂದ್ರದಲ್ಲಿ ಸಾವಿರಾರು ಮಂದಿ ಗುಂಪು ಗುಂಪಾಗಿ ಸೇರುತ್ತಿದ್ದಾರೆ. ಜಿಲ್ಲಾಡಳಿತ ಯಾವುದೇ ನಿಯಂತ್ರಣ ವಿಧಿಸುತ್ತಿಲ್ಲ ಎಂಬುದನ್ನು ಅವರು ಪ್ರಶ್ನಿಸಿದರು.

ಗೋಷ್ಠಿಯಲ್ಲಿ ಕನ್ನಡ ಸಂಘಟನೆಯ ರಮೇಶ್ ಗೌಡ, ವಕೀಲೆ ಜ್ಯೋತಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version