Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ಆವಲಗುರ್ಕಿಯ ಈಶಾ ಯೋಗ ಕೇಂದ್ರದಲ್ಲಿ ಭಾನುವಾರ ನಡೆದ ಈಶಾ ಗ್ರಾಮೋತ್ಸವ (Isha Gramotsavam) ವಿಭಾಗೀಯ ಮಟ್ಟದ ಪಂದ್ಯಾವಳಿಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಹೆಗ್ಗಡಿಹಳ್ಳಿಯ ‘ಇಬ್ಬನಿ’ ತಂಡ ಪುರುಷರ ವಾಲಿಬಾಲ್‌ನಲ್ಲಿ ಹಾಗೂ ಕೊಡಗಿನ ಮರಗೋಡಿನ ‘ಬ್ಲ್ಯಾಕ್ ಪ್ಯಾಂಥರ್ಸ್’ ತಂಡ ಮಹಿಳೆಯರ ಥ್ರೋಬಾಲ್‌ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದವು.
‘ಇಬ್ಬನಿ’ ತಂಡವು ಚಿಕ್ಕಬಳ್ಳಾಪುರ ತಾಲ್ಲೂಕಿನ ಮರಸನಹಳ್ಳಿಯ ‘ಅಪ್ಪು ಬಾಯ್ಸ್’ ತಂಡವನ್ನು ಮಣಿಸಿ ಜಯ ಸಾಧಿಸಿತು. ‘ಬ್ಲ್ಯಾಕ್ ಪ್ಯಾಂಥರ್ಸ್’ ತಂಡವು ದಕ್ಷಿಣ ಕನ್ನಡದ ಬಡಗನೂರಿನ ‘ಕುಡ್ಲ ಸ್ಟ್ರೈಕರ್ಸ್’ ವಿರುದ್ಧ ಗೆಲುವು ಸಾಧಿಸಿ ಕಪ್ ಎತ್ತಿತು. ವಿಜೇತರಿಗೆ ತಲಾ ₹12,000 ಹಾಗೂ ರನ್ನರ್-ಅಪ್ ತಂಡಗಳಿಗೆ ತಲಾ ₹8,000 ನಗದು ಬಹುಮಾನ ವಿತರಿಸಲಾಯಿತು.
ಈಶಾ ಯೋಗ ಕೇಂದ್ರ, ಕೊಯಮತ್ತೂರಿನಲ್ಲಿ ಸೆಪ್ಟೆಂಬರ್ 21ರಂದು ಅಂತಿಮ ಪಂದ್ಯಗಳು ನಡೆಯಲಿವೆ. ಅಂತಿಮ ವಿಜೇತರಿಗೆ ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ತಲಾ ₹5 ಲಕ್ಷ ನಗದು ಬಹುಮಾನ ನೀಡಲಾಗುವುದು.
ಉತ್ಸವಕ್ಕೆ ಚಾಲನೆ ನೀಡಿದ ಸದ್ಗುರು ಜಗ್ಗಿ ವಾಸುದೇವ್ ಮಾತನಾಡಿ, “ಈಶಾ ಗ್ರಾಮೋತ್ಸವವು ಗ್ರಾಮೀಣ ಜನರ ಚೈತನ್ಯವನ್ನು ಹೆಚ್ಚಿಸುತ್ತದೆ. ಕ್ರೀಡೆ, ಜನಪದ ಸಂಗೀತ ಮತ್ತು ಸಾಂಪ್ರದಾಯಿಕ ಚಟುವಟಿಕೆಗಳ ಮೂಲಕ ಗ್ರಾಮೀಣರಿಗೆ ಸಂಭ್ರಮ ಮತ್ತು ನಿರಾಳತೆ ನೀಡುವುದು ನಮ್ಮ ಉದ್ದೇಶ” ಎಂದರು.
ವಿಭಾಗೀಯ ಪಂದ್ಯಾವಳಿಯಲ್ಲಿ ಪುರುಷರ ವಾಲಿಬಾಲ್‌ನ 18 ತಂಡಗಳು ಹಾಗೂ ಮಹಿಳೆಯರ ಥ್ರೋಬಾಲ್‌ನ 14 ತಂಡಗಳು ಪಾಲ್ಗೊಂಡಿದ್ದವು. ಬಹುಮಾನ ವಿತರಣೆ ಸಮಾರಂಭದಲ್ಲಿ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಮತ್ತು ನಟಿ ಶ್ರೀನಿಧಿ ಶೆಟ್ಟಿ ಅತಿಥಿಗಳಾಗಿ ಉಪಸ್ಥಿತರಿದ್ದರು.
