Home Sidlaghatta ವಿಶ್ವಜ್ಞಾನಿ ಭೀಮೋತ್ಸವ-2022

ವಿಶ್ವಜ್ಞಾನಿ ಭೀಮೋತ್ಸವ-2022

0

Sidlaghatta : ನಗರದ ನೆಹರೂ ಕ್ರೀಡಾಂಗಣದಲ್ಲಿ ಸೋಮವಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಒಕ್ಕೂಟದಿಂದ ಆಯೋಜಿಸಿದ್ದ “ವಿಶ್ವಜ್ಞಾನಿ ಭೀಮೋತ್ಸವ-2022 (Bhimotsava) ಹಾಗೂ ಬೃಹತ್ ಸಂವಿಧಾನ ಜನಜಾಗೃತಿ ಐಕ್ಯತಾ ಸಮಾವೇಶ” ಕಾರ್ಯಕ್ರಮದಲ್ಲಿ ಉರಿಲಿಂಗ ಪೆದ್ದಿಮಠದ ಮಠಾಧೀಶ ಜ್ಞಾನಪ್ರಕಾಶ ಸ್ವಾಮೀಜಿ ಅವರು ಮಾತನಾಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ದೀನ, ದಲಿತ, ಶೋಷಿತ ವರ್ಗದವರಿಗೆ ಸಂವಿಧಾನವನ್ನು ರಕ್ಷಾಕವಚವನ್ನಾಗಿ ಕೊಟ್ಟಿದ್ದಾರೆ. ಅದನ್ನು ಉಳಿಸಿಕೊಳ್ಳಬೇಕು ಮತ್ತು ಕಾಪಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಆದರ್ಶದ ಭಾರತದ ಕನಸು ಕಂಡವರು ಡಾ.ಬಿ.ಆರ್.ಅಂಬೇಡ್ಕರ್ ಅವರು. ಆದರೆ ಈಗ ದೇಶದಲ್ಲಿ ಆಯುಧಗಳು ವಿಜೃಂಭಿಸುತ್ತಿವೆ. ಚಪ್ಪಲಿ ಹೊಲೆಯುವವನ ಮಗಳು ಉನ್ನತ ಹುದ್ದೆ ಅಲಂಕರಿಸಲು ಈ ದೇಶದಲ್ಲಿ ಸಾಧ್ಯವಾಗಿದ್ದು ದೇವರ ಪವಾಡದಿಂದಲ್ಲ, ಸಂವಿಧಾನ ರಚಿಸಿದ ಅಂಬೇಡ್ಕರ್ ಪವಾಡದಿಂದ. ಮತದಾನದ ಮಹತ್ವವನ್ನು ಅರಿತಿರುವ ಭೀಮನ ಮಕ್ಕಳಾದಾಗ ಮಾತ್ರ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯ ಸಫಲವಾಗುತ್ತದೆ ಎಂದರು.

ಸಂವಿಧಾನವೆಂದರೆ ಸತ್ತವರ ಬಗ್ಗೆ ಬರೆದ ಪುಸ್ತಕವಲ್ಲ, ಭಾರತೀಯರ ಬದುಕು ಕಟ್ಟಿಕೊಡುವ ಪುಸ್ತಕ. ನಮ್ಮ ಕೈಗೆ ಶಾಸ್ತ್ರಪುರಾಣ ಗ್ರಂಥ ಕೊಟ್ಟು ಮರುಳು ಮಾಡುತ್ತಾರೆ. ಆದರೆ ನಿಜವಾಗಿಯೂ ನಾವು ಹಿಡಿಯಬೇಕಾಗಿರುವುದು ಸಂವಿಧಾನದ ಪುಸ್ತಕ. ಅದನ್ನು ಎಲ್ಲರೂ ಓದಬೇಕಿದೆ. ಅಂಬೇಡ್ಕರ್, ಬುದ್ಧ, ಬಸವ ಇವರನ್ನೆಲ್ಲಾ ಜಾತಿಯಿಂದಾಗಿ ಗುರುತಿಸಬಾರದು, ಅವರ ಜ್ಞಾನದಿಂದ ನಾವು ಗುರುತಿಸುವಂತಾಗಲಿ ಎಂದು ಹೇಳಿದರು.

ಸರ್ಕಾರ ಅರವತ್ತು ಸಾವಿರ ವಿದ್ಯಾರ್ಥಿಗಳ ವಿದ್ಯಾರ್ಥಿವೇತನವನ್ನು ತಡೆಹಿಡಿದಿದೆ. ಕೇಂದ್ರ ಸರ್ಕಾರದ 5 ಲಕ್ಷ 43 ಸಾವಿರ ಹುದ್ದೆಗಳು ಹಾಗೂ ರಾಜ್ಯ ಸರ್ಕಾರದ 2 ಲಕ್ಷ 32 ಸಾವಿರ ಹುದ್ದೆಗಳು ಖಾಲಿ ಇವೆ. ಇವನ್ನು ಭರ್ತಿ ಮಾಡುತ್ತಿಲ್ಲ. ಸಂವಿಧಾನದ ಒಂದೊಂದು ಪುಟವನ್ನೂ ಕಿತ್ತು ಹಾಕುತ್ತಿದ್ದಾರೆ. ಇದರ ಬಗ್ಗೆ ಕಾಳಜಿ ವಹಿಸಿ. ಚುನಾವಣೆ ಬಂದಾಗ ಮತಗಳನ್ನು ಮಾರಿಕೊಳ್ಳದಿರಿ. ಭಾರತಕ್ಕೆ ಈಗ ಬೆಂಕಿ ಬಿದ್ದಿದೆ. ಉದ್ರಿಕ್ತ ಭಾಷಣಗಳಿಂದ ಕೊಲೆಗಳು ಆಗುತ್ತಿವೆ. ದೇಶವನ್ನು ಕಟ್ಟುವ ದೈವಗಳು ನಮಗೆ ಬೇಕು, ದೇಶವನ್ನು ಒದೇಯುವ ದೆವ್ವಗಳಲ್ಲ. ಸ್ವಾಭಿಮಾನದ ಸೂಜಿಗಳಾಗಿ, ಸಮಾಜವನ್ನು ಛಿದ್ರಗೊಳಿಸುವ ಕತ್ತರಿಗಳಾಗಬೇಡಿ ಎಂದರು.

ಮಾಜಿ ಸಚಿವ ಹಾಗೂ ಮಾನವ ಬಂಧುತ್ವ ವೇದಿಕೆ ಅಧ್ಯಕ್ಷ ಸತೀಶ್ ಜಾರಕಿಹೊಳಿ ಮಾತನಾಡಿ, ಅಚ್ಚೇದಿನ್ ಬಂದ ನಂತರ ಶೋಷಣೆ ಪ್ರಾರಂಭವಾಗಿದ್ದಲ್ಲ, ಸಾವಿರಾರು ವರ್ಷಗಳಿಂದಲೂ ಶೋಷಣೆ ನಡೆಯುತ್ತಿದೆ, ಮುಂದೆಯೂ ನಡೆಯುತ್ತದೆ. ಅನ್ಯಾಯವನ್ನು ಒಗ್ಗೂಡಿ ಎದುರಿಸಬೇಕು. ಸಂವಿಧಾನ ಈಗ ಅಪಾಯದಲ್ಲಿದೆ. ಈ ನಿಟ್ಟಿನಲ್ಲಿ ಚಿಂತನೆ ನಡೆಯಬೇಕಿದೆ. ಹೊಸ ಸಮಾಜವನ್ನು ಕಟ್ಟಲು ಮೌಡ್ಯದಿಂದ ಹೊರಬರಬೇಕಿದೆ ಎಂದರು.

ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಹಿಂದುಳಿದವರನ್ನು ಮೇಲೆತ್ತಲು ಶಿಕ್ಷಣವೇ ದೊಡ್ಡ ಅಸ್ತ್ರ. ಶಿಕ್ಷಣ ವಂಚಿತರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.

ಮುಖ್ಯ ಭಾಷಣಕಾರ ಮಹಮ್ಮದ್ ಖಾಸಿಂ ಮಾತನಾಡಿ, ಶೀಷಣೆ, ದೌರ್ಜನ್ಯ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಸರ್ಕಾರವನ್ನು ಟೀಕಿಸಿದರೆ ದೇಶದ್ರೋಹಿಗಳು ಎನ್ನುತ್ತಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಹಾದಿಯಲ್ಲಿ ಸಾಗೋಣ, ಅವರ ಶಕ್ತಿ, ಆಲೋಚನೆ ಪ್ರೇರಣೆ ಆಗಲಿ ಎಂದರು.

ಎ.ಬಿ.ಡಿ.ಗ್ರೂಪ್ ಅಧ್ಯಕ್ಷ ರಾಜೀವ್ ಗೌಡ ಮತ್ತು ಎಸ್.ಎಸ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಪುಟ್ಟು ಅವರುಗಳು ತಮ್ಮ ಟ್ರಸ್ಟ್ ಮೂಲಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಪ್ರೋತ್ಸಾಹ ನೀಡುವುದಾಗಿ ಘೋಷಿಸಿದರು.

ಅಂಬೇಡ್ಕರ್ ಅವರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿಕೊಂಡು ಚಿಂತಾಮಣಿ ರಸ್ತೆಯಲ್ಲಿನ ವಾಲ್ಮೀಕಿ ದೇವಾಲಯದಿಂದ ನೆಹರೂ ಕ್ರೀಡಾಂಗಣದವರೆಗೆ ಮೆರವಣಿಗೆಯನ್ನು ಮಾಡಲಾಯಿತು.

ನಗರಸಭೆ ಅಧ್ಯಕ್ಷೆ ಸುಮಿತ್ರಾ ರಮೇಶ್, ಮದೀನಾ ಮಸೀದಿ ಅಧ್ಯಕ್ಷ ಎಚ್.ಎಸ್.ಫಯಾಜ್, ಲಗುನಾಯಕನಹಳ್ಳಿ ಮುನಿಯಪ್ಪ, ಜಾಮಿಯಾ ಮಸೀದಿಯ ಸಲಾಂ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ, ದಲಿತ ಸಂಘರ್ಷ ಸಮಿತಿಯ ಎನ್.ವೆಂಕಟೇಶ್, ಕೆ.ಸಿ.ರಾಜಾಕಾಂತ್, ಮೇಲೂರು ಮಂಜುನಾಥ್, ವೆಂಕಟೇಶ್ ಹಾಜರಿದ್ದರು.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook
http://www.facebook.com/sidlaghatta

Instagram
http://www.instagram.com/sidlaghatta

Youtube
https://www.youtube.com/c/sidlaghatta

Website
http://www.sidlaghatta.com

Join Telegram
https://t.me/Sidlaghatta

error: Content is protected !!
Exit mobile version