Sidlaghatta : ಶೈಕ್ಷಣಿಕವಾಗಿ ಹಿಂದುಳಿದ ಮುಸ್ಲಿಂ ಸಮುದಾಯದ ಮಕ್ಕಳು ಉತ್ತಮ ವಿದ್ಯಾಭ್ಯಾಸ ಮಾಡಿ ವಿದ್ಯಾವಂತರಾಗಿ ಸಮಾಜದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಿ ಸಮಾಜ ಮತ್ತು ದೇಶ ಸೇವೆ ಮಾಡಬೇಕೆಂದು ಶಿಡ್ಲಘಟ್ಟದ ಜಾಮಿಯಾ ಮಸೀದಿಯ ಧರ್ಮಗುರು ಹಜರತ್ ಮುಫ್ತಿ ಗುಲಾಮ್ ಜಿಲಾನಿ ತಿಳಿಸಿದರು.
ನಗರದ ರಹಮತ್ ನಗರದಲ್ಲಿನ ಗೌಸಿಯಾ ಮಸೀದಿಯ ಆಶ್ರಯದಲ್ಲಿ ನಡೆಯುತ್ತಿರುವ ಮದರಸಾದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಮತ್ತು ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಸ್ಲಾಂ ಧರ್ಮದಲ್ಲಿ ವಿದ್ಯೆಗೆ ಬಹಳ ಮಹತ್ವ ನೀಡಲಾಗಿದೆ. ವಿಶೇಷವಾಗಿ ನಮ್ಮ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರು ವಿದ್ಯೆಯನ್ನು ಪ್ರಾಪ್ತ ಮಾಡಲು ಅಗತ್ಯ ಬಿದ್ದರೆ ಚೀನಾ ದೇಶಕ್ಕೂ ಸಹ ಹೋಗಿ ಎಂದಿದ್ದರು. ಆದರೆ ದುರಾದೃಷ್ಟ ನಮ್ಮ ಮಕ್ಕಳು ಶಿಕ್ಷಣದಿಂದ ವಂಚಿತಗೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಕಳೆದ ಒಂದು ವರ್ಷದಿಂದ ಪ್ರಾರ್ಥನೆ ಸಲ್ಲಿಸುವ ವಿಧಾನ, ಜಾತಿ ಮತ್ತು ಧರ್ಮ ಮರೆತು ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಲು ಮತ್ತು ಜನ್ಮ ನೀಡಿದ ತಂದೆ ತಾಯಿ ಹಾಗೂ ಗುರು ಹಿರಿಯರಿಗೆ ಗೌರವಿಸುವ ಸಂಸ್ಕಾರವನ್ನು ಮದರಸದಲ್ಲಿ ಕಲಿಸಲಾಗಿತ್ತು. ಅದನ್ನು ವಿದ್ಯಾರ್ಥಿಗಳು ಪೋಷಕರ ಸಮ್ಮುಖದಲ್ಲಿ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶನ ಮಾಡಿದರು.
ಈ ವೇಳೆ ಗೌಸಿಯ ಮಸೀದಿಯ ಧರ್ಮಗುರು ಹಜರತ್ ಮೌಲಾನಾ ಅಫಜಲ್ ಇಮಾಮ್ ಅವರು ವಿದ್ಯಾರ್ಥಿಗಳಿಗೆ ಅತ್ಯುತ್ತಮವಾಗಿ ಧಾರ್ಮಿಕ ಶಿಕ್ಷಣವನ್ನು ನೀಡಿದರು ಅದನ್ನು ವಿದ್ಯಾರ್ಥಿಗಳು ವಿಶೇಷವಾಗಿ ಪುಟಾಣಿಗಳು ಪ್ರಶ್ನೆ ಮತ್ತು ಉತ್ತರದ ಮೂಲಕ ವಿವರಿಸಿದರು. ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಗೌಸಿಯಾ ಮಸೀದಿಯ ಅಧ್ಯಕ್ಷ ಅನ್ವರ್ ಸಾಬ್, ಉಪಾಧ್ಯಕ್ಷ ಸರ್ದಾರ್, ಕಾರ್ಯದರ್ಶಿ ಇಂತಿಯಾಸ್, ಖಜಾಂಚಿ ಅಲಿಮುಲ್ಲಾ, ನಗರಸಭಾ ಸದಸ್ಯ ತನ್ವೀರ್ ಪಾಷಾ, ನಗರಸಭೆಯ ಮಾಜಿ ಅಧ್ಯಕ್ಷ ರಹಮತ್ ಉಲ್ಲಾ, ಮಸೀದಿಯ ಮುಖ್ಯಸ್ಥರಾದ ಕೆ.ಪಿ.ಖಲೀಲ್ ಸಾಬ್, ಅಮ್ಜದ್, ಬಾಬಾ ಜಾನ್, ಖಲೀಲ್ ಸಾಬ್, ಯುವ ಜನ ಸಮಿತಿಯ ಜಮೀರ್ ಶೇಖ್, ಇಮ್ರಾನ್ ಖಾನ್, ನೂರುಲ್ಲಾ, ಸಮಿವುಲ್ಲಾ ಹಾಜರಿದ್ದರು.