Chikkaballapur : ಚಿಕ್ಕಬಳ್ಳಾಪುರ ನಗರದಲ್ಲಿ ಮಂಗಳವಾರ ಮಾಜಿ ಸಂಸದ ಎಂ.ವೀರಪ್ಪ ಮೊಯಿಲಿ (Veerappa Moily) ಸುದ್ದಿಗೋಷ್ಠಿ (Press Meet) ನಡೆಸಿದರು.
1992ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ಅನುಷ್ಠಾನಗೊಳಿಸಿದ ಚಿನ್ನಪ್ಪರೆಡ್ಡಿ ಆಯೋಗದ ವರದಿಗೆ ಪೂರಕವಾಗಿ ಅಲ್ಪಸಂಖ್ಯಾತರ ಅಭಿವೃದ್ಧಿಗೂ ಸಮೀಕ್ಷೆ ನಡೆಸಿ ವರದಿಯನ್ನು ಅನುಷ್ಠಾನಗೊಳಿಸಲಾಗಿತ್ತು. ಇದರಿಂದ ಅಲ್ಪಸಂಖ್ಯಾತರಿಗೆ ಉದ್ಯೋಗ ಮತ್ತಿತರ ಕ್ಷೇತ್ರದಲ್ಲಿ ಅನುಕೂಲವಾಯಿತು . ದೇವೇಗೌಡ ಅವರು ಅಧಿಕಾರಕ್ಕೆ ಬಂದಿದ್ದು 1994ರಲ್ಲಿ. ಆದರೆ ಅವರು ಅಲ್ಪಸಂಖ್ಯಾತರ ಅಭಿವೃದ್ಧಿಗೆ ನಾನು ಕಾರಣ ಎನ್ನುತ್ತಾರೆ ಎಂದು ಮೊಯಿಲಿ ತಿಳಿಸಿದರು.
ಕಾವೇರಿ ವಿಚಾರವಾಗಿ ಸ್ಪಂದಿಸಿದ ಅವರು “ಗಂಡಾಂತರ ಬಂದಾಗ ಪ್ರಧಾನಿ ಹಸ್ತಕ್ಷೇಪ ಮಾಡಬೇಕು. ಆದರೆ ಭೇಟಿಗೆ ಸಿದ್ದರಾಮಯ್ಯ ಅವರಿಗೆ ಪ್ರಧಾನಿ ಸಮಯವನ್ನೇ ಕೊಡುತ್ತಿಲ್ಲ. ರಾಜ್ಯಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಒಕ್ಕೂಟ ವ್ಯವಸ್ಥೆ ನಾಶವಾಗಬೇಕು ಮತ್ತು ಸರ್ವಾಧಿಕಾರ ಜಾರಿಗೊಳ್ಳಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರ ನಿರೀಕ್ಷೆ ಎಂದು ದೂರಿದರು.
‘ಇಂಡಿಯಾ’ ಒಕ್ಕೂಟವು ಈಗಾಗಲೇ ಮೂರು ಸಭೆಗಳನ್ನು ನಡೆಸಿದೆ. ಇಲ್ಲಿ 30 ಪಕ್ಷಗಳ ಎಲ್ಲರೂ ನಾಯಕರೇ ಆಗಿದ್ದಾರೆ. ಆಯಾ ಪಕ್ಷಗಳಿಗೆ ಸಂಘಟನೆ, ಸಿದ್ಧಾಂತ, ಧ್ಯೇಯ ಧೋರಣೆಗಳು ಇವೆ. ಆದರೂ ಒಗ್ಗಟ್ಟಿನಿಂದ ಹೋಗಬೇಕು ಎನ್ನುವ ಸಂಕಲ್ಪವನ್ನು ಇಂಡಿಯಾ ಒಕ್ಕೂಟ ಮಾಡಿದೆ ಒಂದು ಪಕ್ಷ ಮೇಲು ಮತ್ತೊಂದು ಕಡಿಮೆ ಎನ್ನುವುದಲ್ಲ. ಇಂತಹವರೇ ಪ್ರಧಾನಿ ಆಗಬೇಕು ಎಂದು ನಾವು ಪಟ್ಟು ಹಿಡಿದಿಲ್ಲ ಎಂದು ಎಂ.ವೀರಪ್ಪ ಮೊಯಿಲಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರಾದ ಶಿವಾನಂದ್, ಎಸ್.ಎಂ.ಮುನಿಯಪ್ಪ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಂದಿ ಆಂಜಿನಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಂ, ನಗರಸಭೆ ಸದಸ್ಯ ರಫೀಕ್ ಮತ್ತಿತರರು ಉಪಸ್ಥಿತರಿದ್ದರು.