Chikkaballapur : ಉತ್ತರ ಪ್ರದೇಶದಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದ ರೈತರ ಮೇಲೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಬೆಂಗಾವಲು ಪಡೆಯ ವಾಹನ ಹರಿದು ರೈತರು ಮೃತಪಟ್ಟ ಪ್ರಕರಣಕ್ಕೆ ಆಕ್ರೋಶ ವ್ಯಕ್ತಪಡಿಸಿ ರೈತ ಸಂಘ, ಕನ್ನಡ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಚಿಕ್ಕಬಳ್ಳಾಪುರ ನಗರದ ಶಿಡ್ಲಘಟ್ಟ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಿಶ್ರಾ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿದರು.
ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿರುವ ಬಿಜೆಪಿ ಸರ್ಕಾರವನ್ನು ಮೊದಲು ತೊಲಗಿಸಬೇಕು. ಕೇಂದ್ರ ಸಚಿವ ಅಜಯ್ ಮಿಶ್ರಾ ಮತ್ತು ಅವರ ಪುತ್ರ ಅಶಿಶ್ ಮಿಶ್ರಾ ರೈತರ ವಿರುದ್ಧ ನಡೆದುಕೊಂಡ ರೀತಿ ಸರಿಯಲ್ಲ. ಕೇಂದ್ರ ಸರ್ಕಾರ ಇವರನ್ನು ಕೂಡಲೇ ಬಂಧಿಸಬೇಕಾಗಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಏಕೆ ಬಂಧನಕ್ಕೆ ಕ್ರಮವಹಿಸಲಿಲ್ಲ ಎಂದರು.
8 ಜನ ರೈತ ಹೋರಾಟಗಾರರ ಹತ್ಯೆ ಆಗಿದ್ದು, 11 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಜಯ್ ಮಿಶ್ರಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸದಿದ್ದರೆ ರಾಜ್ಯ ಮತ್ತು ದೇಶದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಮಾತನಾಡಿದರು. ರೈತ ಸಂಘದ ಮುಖಂಡರಾದ ಲಕ್ಷ್ಮಣ್ ರೆಡ್ಡಿ, ಮುನಿ ನಂಜಪ್ಪ, ರಾಮಾಂಜಿನಪ್ಪ, ತಾದೂರು ಮಂಜುನಾಥ್, ಬಯ್ಯಾರೆಡ್ಡಿ, ಬಿ. ನಾರಾಯಣಸ್ವಾಮಿ, ಗೋಪಾಲ್, ಮುನಿಕೃಷ್ಣಪ್ಪ, ಕೆಂಪರೆಡ್ಡಿ, ರಾಮಾಂಜಿ, ಬಸವರಾಜು, ಪಿ.ವಿ ದೇವರಾಜ್ ಕೆಂಪಣ್ಣ, ಚಾಂದ್ ಪಾಷ ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.